ನಾಂದೇಡ್: ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಸಿಕ್ಕ ಸಿಕ್ಕ ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಾರ್ಯಕರ್ತರನ್ನು ಅರೆಬೆತ್ತಲೆ ಮಾಡಿ ಪೊಲೀಸ್ ಅಧಿಕಾರಿಯೊಬ್ಬರು ಥಳಿಸಿದ ಘಟನೆ ಕನ್ವಟ್ ತಾಲೂಕಿನ ಇಸ್ಲಾಮ್ ಪುರ ಎಂಬಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಯು ಯುವಕರನ್ನು ನಿರ್ದಯವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಫೆ.1 ರಂದು ಜಾನುವಾರುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ ಎಂದು ವಾಹನವನ್ನು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತಡೆದು ಪ್ರಶ್ನಿಸಿದ್ದರು. ಈ ವೇಳೆ ಗಲಾಟೆ ನಡೆದು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ವಾಹನದಲ್ಲಿದ್ದವರು ವಿಹಿಂಪ ಕಾರ್ಯಕರ್ತ ಮೇಲೆ ದೂರು ನೀಡಿದ್ದರು.
ಇಸ್ಲಾಂಪುರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ರಘುನಾಥ ಶೆವಾಲೆ ಪ್ರಕರಣ ದಾಖಲಿಸಿಕೊಳ್ಳದೇ ಯುವಕರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. ವಾಹನ ತಡೆದು ಗಲಾಟೆ ನಡೆಸಿದ ಬಗ್ಗೆ ಕೇಳಿದಾಗ ಯುವಕರು ಅಕ್ರಮವಾಗಿ ಜಾನುವಾರು ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಅಧಿಕಾರಿಯು ಯುವಕರನ್ನು ಠಾಣೆಯಲ್ಲೇ ಅರೆಬೆತ್ತಲೆಗೊಳಿಸಿದ್ದಾರೆ. ಬಳಿಕ ಯಾವುದೇ ಕೇಸ್ ದಾಖಲಿಸಿಕೊಳ್ಳದಿದ್ದರೂ, ಅವರನ್ನು ನಿರ್ದಯವಾಗಿ ಥಳಿಸಿದ್ದಾರೆ ಎನ್ನಲಾಗಿದೆ. ವಿಹಿಂಪ ಕಾರ್ಯಕರ್ತರನ್ನು ಠಾಣೆಯಲ್ಲೇ ಕೂರಿಸಿಕೊಂಡು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದನ್ನೆಲ್ಲಾ ಅಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ವಿಡಿಯೋ ಗಮನಿಸಿದ್ದ ಉನ್ನತ ಪೊಲೀಸ್ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಅದರಂತೆ ಯುವಕರನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಘಟನೆಯ ಬಗ್ಗೆ ಪ್ರಾಥಮಿಕ ತನಿಖೆಗೂ ಆದೇಶಿಸಿದ್ದಾರೆ.