ತಿರುವನಂತಪುರಂ: ಪಾನಮತ್ತರಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ 16 ಮಂದಿ ಬಸ್ ಚಾಲಕರಿಗೆ “ನಾವು ಮತ್ತೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದಿಲ್ಲ” ಎಂದು 1 ಸಾವಿರ ಬಾರಿ ಬರೆಸಿರುವ ಘಟನೆ ನಡೆದಿದೆ.
ತೃಪ್ಪುಣಿತ್ರ ಬೆಟ್ಟದ ಅರಮನೆ ಠಾಣಾ ಇನ್ ಸ್ಪೆಕ್ಟರ್ ವಿ.ಗೋಪಕುಮಾರ್ ಅವರು ಇಂದು ಬೆಳಗಿನ ಜಾವ 5 ಗಂಟೆಯಿಂದ 9 ಗಂಟೆಯವರೆಗೆ ಪಾನಮತ್ತ ಚಾಲಕರ ಶೋಧ ನಡೆಸಿದರು. ಪರಿಶೀಲನೆಯಲ್ಲಿ ಇಬ್ಬರು ಕೆಎಸ್’ಆರ್’ಟಿಸಿ ಬಸ್ ಚಾಲಕರು, 10 ಖಾಸಗಿ ಬಸ್ ಚಾಲಕರು ಮತ್ತು 4 ಶಾಲಾ ಬಸ್ ಚಾಲಕರು ಪಾನಮತ್ತರಾಗಿರುವುದು ಬೆಳಕಿಗೆ ಬಂದಿದೆ.
ಸಿಕ್ಕಿಬಿದ್ದ ಚಾಲಕರಿಂದ 1000 ಬಾರಿ ಮತ್ತೊಮ್ಮೆ ತಪ್ಪು ಮಾಡುವುದಿಲ್ಲ ಎಂದು ಬರೆಸಿದ ಬಳಿಕ ಚಾಲಕರಿಗೆ ಜಾಮೀನು ನೀಡಲಾಯಿತು. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕರು ನೆಲದ ಮೇಲೆ ಕುಳಿತು ಬರೆಯುತ್ತಿರುವುದನ್ನು ಕಾಣಬಹುದು.
ಕಾರ್ಯಾಚರಣೆ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪೊಲೀಸರು ಮತ್ತೊಂದು ಬಸ್ ವ್ಯವಸ್ಥೆ ಮಾಡಿ ಕಳುಹಿಸಿದರು. ಶಾಲಾ ಬಸ್‌ನಲ್ಲಿದ್ದ ಮಕ್ಕಳನ್ನು ಪೊಲೀಸ್ ಇಲಾಖೆಯ ಮತ್ತೊಂದು ಬಸ್’ಗೆ ಸ್ಥಳಾಂತರಿಸಲಾಯಿತು. ಸಿಕ್ಕಿಬಿದ್ದ ಇಬ್ಬರು ಚಾಲಕರ ಬಗ್ಗೆ ಕೆಎಸ್‌ಆರ್’ಟಿಸಿಗೆ ವಿಶೇಷ ವರದಿ ಹೋಗಲಿದೆ.
ಘಟನೆಯ ಬಗ್ಗೆ ತಹಸೀಲ್ದಾರ್ ವಿ.ಗೋಪಕುಮಾರ್ ಮಾತನಾಡಿ, ಕೃತ್ಯದಲ್ಲಿ ಸಿಕ್ಕಿಬಿದ್ದ ಚಾಲಕರ ಪರವಾನಗಿ ರದ್ದುಪಡಿಸಲು ಇಲಾಖೆ ಮುಂದಾಗಿದೆ ಎಂದರು.