ಪಾಟ್ನ: ಸಿಂಗಾಪುರದ ಆಸ್ಪತ್ರೆಯಲ್ಲಿ ಕಳೆದ ಡಿಸೆಂಬರ್’ನಲ್ಲಿ ಮೂತ್ರಪಿಂಡ ಕಸಿಗೆ ಒಳಗಾಗಿರುವ ಆರ್’ಜೆಡಿ- ರಾಷ್ಟ್ರೀಯ ಜನತಾ ದಳ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ಶನಿವಾರ ಭಾರತಕ್ಕೆ ವಾಪಸಾಗಿದ್ದಾರೆ.
ತಂದೆಗೆ ತನ್ನ ಒಂದು ಮೂತ್ರಪಿಂಡ ದಾನ ಮಾಡಿದ ಲಾಲೂ ಪ್ರಸಾದರ ಮಗಳು ರೋಹಿಣಿ ಆಚಾರ್ಯ ಅವರು ಲಾಲೂರವರು ಇಂದು ಹಿಂದಿರುಗುವ ಬಗ್ಗೆ ನಿನ್ನೆಯೇ ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದರು.
“ಒಂದು ಮುಖ್ಯ ವಿಷಯ ಹೇಳಬೇಕಾಗಿದೆ. ಮುಖ್ಯ ವಿಷಯವೆಂದರೆ ನಮ್ಮ ನಾಯಕ ಲಾಲೂಜಿಯವರ ಆರೋಗ್ಯ. ಪಾಪಾ ಫೆಬ್ರವರಿ 11ರಂದು ಸಿಂಗಾಪುರದಿಂದ ಭಾರತಕ್ಕೆ ಹೊರಡುವರು. ನಾನು ಮಗಳಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ನನ್ನ ತಂದೆಯನ್ನು ಆರೋಗ್ಯವಂತರಾಗಿಸಿ ವಾಪಸು ನಿಮ್ಮಲ್ಲಿಗೆ ಕಳುಹಿಸುತ್ತಿದ್ದೇನೆ. ಈಗ ನೀವೆಲ್ಲರೂ ನನ್ನ ತಂದೆಯ ಕಾಳಜಿ ತೆಗೆದುಕೊಳ್ಳಬೇಕು” ಎಂದು ರೋಹಿಣಿ ಆಚಾರ್ಯ ಭಾವನಾತ್ಮಕವಾಗಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಲಾಲೂ ಪ್ರಸಾದರು ತನ್ನ ಮಗಳು ರೋಹಿಣಿಯಿಂದ ಒಂದು ಕಿಡ್ನಿ ದಾನ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ಲಾಲೂ ಪ್ರಸಾದ್’ರ ಮಗ ತೇಜಸ್ವಿ ಯಾದವ್ ಅವರು ಹೀಗೆ ಟ್ವೀಟ್ ಮಾಡಿದ್ದಾರೆ.
“ಯಶಸ್ವಿ ಮೂತ್ರ ಪಿಂಡ ಕಸಿಯ ಬಳಿಕ ನನ್ನ ತಂದೆಯನ್ನು ಶಸ್ತ್ರಚಿಕಿತ್ಸಾ ಕೋಣೆಯಿಂದ ಐಸಿಯುಗೆ ವರ್ಗಾಯಿಸಲಾಗಿದೆ. ದಾನಿ ಅಕ್ಕ ರೋಹಿಣಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಇಬ್ಬರೂ ಆರೋಗ್ಯದಿಂದ ಇದ್ದಾರೆ. ನಿಮ್ಮ ಶುಭ ಕಾಮನೆಗಳು ಮತ್ತು ಹರಕೆಗಳಿಗೆ ನಮನಗಳು” ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.
ಶಸ್ತ್ರಚಿಕಿತ್ಸೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ತೇಜಸ್ವಿ ಯಾದವರಿಗೆ ಫೋನ್ ಮಾಡಿ ಆರ್ ಜೆಡಿ ಮುಖ್ಯಸ್ಥರು ಗುಣಮುಖರಾಗುತ್ತಿರುವುದರ ಬಗ್ಗೆ ವಿಚಾರಿಸಿಕೊಂಡಿದ್ದರು.
2022ರ ನವೆಂಬರ್ ನಲ್ಲಿ ಅಕ್ಕ ರೋಹಿಣಿಯವರ ಕಿಡ್ನಿ ತಂದೆಗೆ ಸೂಕ್ತವಾಗಿ ಸರಿ ಹೊಂದುವುದಾಗಿ ವೈದ್ಯರು ತಿಳಿಸಿದ್ದರು. ನಾವು ಆ ನಿಟ್ಟಿನಲ್ಲಿ ಮುಂದುವರಿಯುವುದಾಗಿ ತೇಜಸ್ವಿ ಯಾದವ್ ತಿಳಿಸಿದ್ದರು.
“ನಮ್ಮ ಕುಟುಂಬದಲ್ಲಿ ಯಾರಾದರೊಬ್ಬರು ನಮ್ಮ ತಂದೆಗೆ ಒಂದು ಕಿಡ್ನಿ ನೀಡುವಂತೆ ವೈದ್ಯರು ತಿಳಿಸಿದ್ದರು. ನನ್ನ ಅಕ್ಕ ರೋಹಿಣಿಯ ಮೂತ್ರಪಿಂಡ ಹೆಚ್ಚು ಸೂಕ್ತ ಎಂದು ವೈದ್ಯರು ಪರೀಕ್ಷಿಸಿ ತಿಳಿಸಿದರು. ಅದರಂತೆ ನಾವು ಮುಂದಡಿಯಿಟ್ಟಿದ್ದೇವೆ” ಎಂದು ತೇಜಸ್ವಿ ಯಾದವ್ ಪಾಟ್ನಾದಲ್ಲಿ ಪತ್ರಕರ್ತರಿಗೆ ತಿಳಿಸಿದ್ದರು.
74ರ ಹರೆಯದ ಲಾಲೂ ಪ್ರಸಾದರು ಕೆಲವು ಕಾಲದಿಂದ ಮೂತ್ರಪಿಂಡದ ತೊಂದರೆಗೆ ಒಳಗಾಗಿದ್ದರು. ಈಗ ನೀವು ಕಿಡ್ನಿ ಕಸಿಗೆ ಒಳಗಾಗಲೇಬೇಕು ಎಂದು ವೈದ್ಯರು ತಿಳಿಸಿದ್ದರು.
ಲಾಲೂ ಅವರ ಮಗಳು ರೋಹಿಣಿಯವರು ಕಿಡ್ನಿ ದಾನಕ್ಕೆ ಮುಂದೆ ಬಂದರು. ರೋಹಿಣಿಯವರ ಸೂಚನೆಯಂತೆಯೇ ಶಸ್ತ್ರಚಿಕಿತ್ಸೆಯನ್ನು ಸಿಂಗಾಪುರದಲ್ಲಿ ನಡೆಸಲು ಕುಟುಂಬದವರು ತೀರ್ಮಾನಿಸಿದರು. ರೋಹಿಣಿಯವರು ಎಂಜಿನಿಯರ್ ರಾವ್ ಸಮ್ರೇಶ್ ಸಿಂಗ್ ಅವರನ್ನು ಮದುವೆಯಾಗಿದ್ದು, ಅವರು ಸಿಂಗಾಪುರ ನಿವಾಸಿಯಾಗಿದ್ದಾರೆ. ಈ ದಂಪತಿಗೆ ಎರಡು ಗಂಡು ಒಬ್ಬಳು ಮಗಳು ಇದ್ದಾಳೆ.
ಇಂದು ಮಗಳು ರೋಹಿಣಿ ಮತ್ತು ಸಮ್ರೇಶ್ ಅವರು ತಂದೆ ಮಾವನನ್ನು ಭಾರತದ ವಿಮಾನ ಹತ್ತಿಸಿದರು.