ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟರ್ ತೆರೆದ ಪೊಲೀಸರು: ವ್ಯಾಪಕ ಆಕ್ರೋಶ

Prasthutha|

ಬೆಳಗಾವಿ: ಬೆಳಗಾವಿ ಪಾಲಿಕೆಯಲ್ಲಿ ಮರಾಠಿ ಭಾಷಿಕರಿಗೆ ಮೇಯರ್, ಉಪ ಮೇಯರ್ ಸ್ಥಾನಗಳನ್ನು ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ, ರಾಜ್ಯ ಸರ್ಕಾರ ಕನ್ನಡಪರ ಹೋರಾಟಗಾರರ ವಿರುದ್ಧ ರೌಡಿ ಶೀಟ್ ತೆರೆಯುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

- Advertisement -

 ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದಾರೆ ಎಂದು ಆರೋಪಿಸಿ ಕನ್ನಡ ಪರ ಹೋರಾಟಗಾರರಾದ ಸಂಪತ್‌ ಕುಮಾರ್ ದೇಸಾಯಿ ಮತ್ತು ಅನಿಲ್ ದಡ್ಡಿಮನಿ ಎಂಬ ಯುವಕರ ವಿರುದ್ಧ ರೌಡಿ ಶೀಟರ್ ತೆರೆಯಲಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಜಾರಿ ಮಾಡಿದ್ದ ಕಾರಣ ಕೇಳಿ ನೋಟಿಸ್ ನೋಡಿ ಕನ್ನಡಪರ ಹೋರಾಟಗಾರರಿಗೆ ಶಾಕ್ ನೀಡಿರುವ ಬೆಳಗಾವಿ ಪೋಲೀಸರು, ಟಿಳಕವಾಡಿ ಠಾಣೆಯಿಂದ ಅನಿಲ್ ದಡ್ಡಿಮನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಎಪಿಎಂಸಿ ಠಾಣೆಯಿಂದ ಸಂಪತ್‌ಕುಮಾರ್ ದೇಸಾಯಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

- Advertisement -

ಚುನಾವಣೆ ಕಾಲದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಮುಚ್ಚಳಿಕೆ ನೀಡುವಂತೆ ನೋಟಿಸ್ ಜಾರಿಯಾಗಿದೆ. 50 ಸಾವಿರ ರೂ. ಮೊತ್ತದ ಸ್ವಯಂ ಮುಚ್ಚಳಿಕೆ ಹಾಗೂ ಇಷ್ಟೇ ಮೊತ್ತದ ಇಬ್ಬರು ಜಾಮೀನುದಾರರಿಂದ ಮುಚ್ಚಳಿಕೆ ಪಡೆಯುವಂತೆ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ಪೀರಣವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದ ಇಬ್ಬರು ಯುವಕರು, 2021ರ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್‌’ಗೆ ನುಗ್ಗಿ ಎಂಇಎಸ್ ಮುಖಂಡ ದೀಪಕ್ ದಳವಿಗೆ ಮಸಿ ಬಳಿದಿದ್ದರು.  

ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದ ಹಿನ್ನೆಲೆ ಜೈಲು ಸೇರಿ ಬಿಡುಗಡೆಯಾಗಿದ್ದ ಇಬ್ಬರು ಕನ್ನಡ ಹೋರಾಟಗಾರರು ಪೋಲೀಸರ ದೃಷ್ಟಿಯಲ್ಲಿ ರೌಡಿಗಳಾಗಿರುವುದು ದುರದೃಷ್ಟಕರ ಎಂದು ಹಲವು ಕನ್ನಡ ಪರ ಹೋರಾಟಗಾರರು ಪೊಲೀಸರ ಕ್ರಮವನ್ನು ಟೀಕಿಸಿದ್ದಾರೆ.

 ಪೊಲೀಸರ ಕ್ರಮವನ್ನು ವಿರೋಧಿಸಿ ಸಾಮಾಜಿಕ ಜಾಲತಾಣ ಟ್ವೀಟರ್‌’ನಲ್ಲಿ ಅಭಿಯಾನ ಆರಂಭಿಸಲಾಗಿದೆ.

ಹ್ಯಾಷ್‌ಟ್ಯಾಗ್‌ #ನಾಡವಿರೋಧಿ ಸರ್ಕಾರ ಎಂಬ ಹೆಸರಿನಲ್ಲಿ ಅಭಿಯಾನ ಶುರುವಾಗಿದ್ದು, ನಮ್ಮ ಸರ್ಕಾರ ನಮ್ದಲ್ಲ.. ಬೆಳಗಾವಿ ನಮ್ದಲ್ಲ.. ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಕನ್ನಡಿಗರು ರಾಜ್ಯ ಸರ್ಕಾರ ಕನ್ನಡಿಗರ ವಿರೋಧಿ ಸರ್ಕಾರ ಎಂದು ಆರೋಪಿಸಿದ್ದಾರೆ.



Join Whatsapp