ಬೆಳ್ತಂಗಡಿ: ನಿನ್ನೆ ಉಜಿರೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಸಂಭ್ರಮಾಚರಣೆಯ ವೇಳೆ ಎಸ್.ಡಿ.ಪಿ.ಐ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಸಂಬಂಧ ಪೊಲೀಸರು ಕೆಲವು ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ಬಂಧಿಸಿದ್ದು, ದೇಶದ್ರೋಹ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹೈದರ್ ನೀರ್ಸಾಲ್ ಎಸ್.ಡಿ.ಪಿ.ಐ ಬೆಳವಣಿಗೆಯನ್ನು ಸಹಿಸದ ಕೆಲವು ಸಂಘಪರಿವಾರ ಪ್ರೇರಿತ ಮಾಧ್ಯಮಗಳು ಈ ರೀತಿಯಲ್ಲಿ ವರದಿ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರು ಗ್ರಾಮ ಪಂಚಾಯತ್ ಅಭ್ಯರ್ಥಿಗಳ ಗೆಲುವನ್ನು ಸಂಭ್ರಮಿಸುವುದಕ್ಕಾಗಿ ಅಲ್ಲಿ ಸೇರಿದ್ದರು. ಅವರು ಎಸ್.ಡಿ.ಪಿ.ಐ ಪರ ಘೋಷಣೆ ಕೂಗಿದ್ದರೇ ಹೊರತು ಯಾವುದೇ ರೀತಿಯಲ್ಲಿ ಪಾಕ್ ಪರ ಘೋಷಣೆಯನ್ನು ಕೂಗಿಲ್ಲ. ಹಾಗೆ ಕೂಗುವ ಅವಶ್ಯಕತೆಯೂ ಇಲ್ಲ. ವೀಡಿಯೊದಲ್ಲಿ ಎಲ್ಲೂ ಪಾಕ್ ಪರ ಘೋಷಣೆಗಳು ಕೇಳುವುದೇ ಇಲ್ಲ” ಎಂದು ‘ಪ್ರಸ್ತುತ’ದೊಂದಿಗೆ ಮಾತನಾಡಿದ ಹೈದರ್ ನೀರ್ಸಾಲ್ ಹೇಳಿದರು.
“ಮೊದಲು ‘ದಿಗ್ವಿಜಯ್ ನ್ಯೂಸ್’ ಚಾನೆಲ್ ನಲ್ಲಿ ಈ ಸುಳ್ಳು ಸುದ್ದಿ ಪ್ರಕಟವಾಗಿದೆ. ನಂತರ ಇತರ ಮಾಧ್ಯಮಗಳು ಅದನ್ನು ಅನುಕರಿಸಿವೆ. ಕೆಲವು ಪ್ರತಿಷ್ಠಿತ ಟಿ.ವಿ ಚಾನೆಲ್ ಗಳಿಗೆ ಆಗಲೇ ನಾವು ಕರೆ ಮಾಡಿ ವಾಸ್ತವ ಪರಿಸ್ಥಿತಿಯನ್ನು ವಿವರಿಸಿದ್ದು, ಅವರು ಕೂಡಲೇ ಆ ಸುದ್ದಿಯ ಪ್ರಸಾರವನ್ನು ನಿಲ್ಲಿಸಿದ್ದಾರೆ” ಎಂದು ಅವರು ತಿಳಿಸಿದರು.
“ಈ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಜಿಲ್ಲೆ ಮತ್ತು ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ್ದು, ತನ್ನ ಪ್ರಾಬಲ್ಯವನ್ನು ಹೆಚ್ಚಿಸಿ ಕೊಂಡಿದೆ. ಕೋಮುವಾದಿ ಫ್ಯಾಶಿಸಂ ವಿರುದ್ಧದ ರಾಜಿಯಿಲ್ಲದ ನಿಲುವು ಹೊಂದಿರುವ ಎಸ್.ಡಿ.ಪಿ.ಐ ಅಭಿವೃದ್ಧಿಯನ್ನು ಭಯಪಟ್ಟ ಸಂಘಪರಿವಾರ ಮತ್ತು ಅವರ ಮಾಧ್ಯಮಗಳು ಈ ಷಡ್ಯಂತ್ರವನ್ನು ರೂಪಿಸಿವೆ” ಎಂದು ಅವರು ಹೇಳಿದರು.