ಬೆಂಗಳೂರು : 2020ರ ಕೊನೆಯ ದಿನ ಹಾಗೂ 2021 ಅನ್ನು ಸ್ವಾಗತಿಸುವ ದಿನವಾದ ಇಂದು ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್ ಬೀಳಲಿದ್ದು, ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಹೇರಲಾಗಿದೆ. ಮಧ್ಯಾಹ್ನ 12ರಿಂದಲೇ ನಿಷೇಧಾಜ್ಞೆ ಜಾರಿಯಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ಆದೇಶ ಹೊರಡಿಸಿದ್ದಾರೆ.
ಇಂದು ಸಂಜೆ 6 ಗಂಟೆಯಿಂದ ಹೇರಲಾಗಿದ್ದ ನಿಷೇಧಾಜ್ಞೆ ಆದೇಶವನ್ನು ಪರಿಶೀಲಿಸಲಾಗಿದ್ದು, ಮಧ್ಯಾಹ್ನ 12ರಿಂದಲೇ ಜಾರಿ ಬರುವಂತೆ ಆದೇಶಿಸಲಾಗಿದೆ. ರತ್ರಿ 10 ಗಂಟೆ ನಂತರ ಬೆಂಗಳೂರಿನ ಎಲ್ಲಾ ಫ್ಲೈ ಓವರ್ ಗಳು ಬಂದ್ ಆಗಲಿದ್ದು, ಬೆಂಗಳೂರಿನಾದ್ಯಂತ ಪೊಲೀಸರ ಹದ್ದಿನ ಕಣ್ಣಿರಲಿದೆ.
ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರಿನ 15 ಕಡೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಮಾರ್ಗೋಸ್ ರೋಡ್, ರೆಸಿಡೆನ್ಸಿ ರೋಡ್, ಇಂದಿರಾ ನಗರ ರೋಡ್, ಕಬ್ಬನ್ ಪಾರ್ಕ್ ರೋಡ್ ಸೇರಿ 15 ಕಡೆ ನಿರ್ಬಂಧ ಹೇರಲಾಗಿದೆ.
ಎಂ.ಜಿ. ರೋಡ್ ಸುತ್ತಮುತ್ತ ರಾತ್ರಿ 8 ಗಂಟೆ ಬಳಿಕ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಎಂ.ಜಿ. ರೋಡ್ ಸುತ್ತಮುತ್ತ 15 ಕಡೆ ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಹೊಸ ರೂಪಾಂತರಿತ ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ, ಹೊಸ ವರ್ಷಾಚರಣೆ ತಡೆಗೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.