ಮಂಗಳೂರು : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಬಹುತೇಕ ಪೂರ್ಣಗೊಂಡಿದ್ದು, ಎಸ್ ಡಿಪಿಐ ಸ್ಪರ್ಧಿಸಿದ್ದ 485 ಸ್ಥಾನಗಳಲ್ಲಿ 224 ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಈ ಬಗ್ಗೆ ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಬಿಡುಗಡೆಗೊಳಿಸಿರುವ ಮಾಹಿತಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕಳೆದ 2015ರ ಗ್ರಾಮ ಪಂಚಾಯತ್ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಎಸ್ ಡಿಪಿಐ ಶೇ.300ರಷ್ಟು ಹೆಚ್ಚಿನ ಫಲಿತಾಂಶ ದಾಖಲಿಸಿದೆ.
ಒಟ್ಟು 3 ಗ್ರಾಮ ಪಂಚಾಯತ್ ಗಳಲ್ಲಿ ಎಸ್ ಡಿಪಿಐಗೆ ಸ್ಪಷ್ಟಬಹುಮತ ದೊರಕಿದೆ. 10 ಗ್ರಾಮ ಪಂಚಾಯತ್ ಗಳಲ್ಲಿ ನಿರ್ಣಾಯಕ ಪಾತ್ರವನ್ನು ಎಸ್ ಡಿಪಿಐ ನಿರ್ವಹಿಸಲಿದೆ.
ಸೋತಿರುವವರಲ್ಲಿ ಸುಮಾರು 50ಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಲವೇ ಮತಗಳ ಅಂತರದಿಂದ ಸೋತಿದ್ದಾರೆ. ಗೆದ್ದವರಲ್ಲಿ ಶೇ.20ರಷ್ಟು ಅಭ್ಯರ್ಥಿಗಳು ದಲಿತ ಮತ್ತು ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಶೇ.50ಕ್ಕೂ ಹೆಚ್ಚು ಮಂದಿ ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಾಗಿದೆ. ರಾತ್ರಿ 11:30ರ ವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, 167 ಎಸ್ ಡಿಪಿಐ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಿದ್ದಾರೆ. ಅವರಲ್ಲಿ ಉಳ್ಳಾಲದಲ್ಲಿ ಗರಿಷ್ಠ 52 ಅಭ್ಯರ್ಥಿಗಳು ಗೆದ್ದಿದ್ದಾರೆ.
ಉಲ್ಲಾಳದಲ್ಲಿ 52, ಮಂಗಳೂರು ಉತ್ತರ 28, ಮೂಡುಬಿದಿರೆ 13, ಬಂಟ್ವಾಳ 27. ಪುತ್ತೂರು 15, ಬೆಳ್ತಂಗಡಿ 22, ಸುಳ್ಯ 7 ಮತ್ತು ಕಡಬದಲ್ಲಿ 3 ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ.