ಕೊಂಗಣ (ಆಗ್ನೇಯ) ಟರ್ಕಿಯ ಸಾನ್ಲಿಉರ್ಫ ಪ್ರದೇಶದಲ್ಲಿ ಅವಶೇಷಗಳ ಅಡಿಯಿಂದ 22 ಗಂಟೆಗಳ ಬಳಿಕ ಮಹಿಳೆಯನ್ನು ಜೀವಂತ ಹೊರ ತೆಗೆದು ಆಸ್ಪತ್ರೆಗೆ ಸೇರಿಸಲಾಗಿದೆಯೆಂದು ಟರ್ಕಿಯ ಸರಕಾರೀ ಸುದ್ದಿ ಮಾಧ್ಯಮ ಅಂಡಲೋ ವರದಿ ಮಾಡಿದೆ.
ರಾಷ್ಟ್ರೀಯ ರಕ್ಷಣಾ ದಳದವರು ಆ ಮಹಿಳೆಯನ್ನು ಅವಶೇಷಗಳಡಿಯಿಂದ ಮೇಲೆತ್ತುವುದರ ವೀಡಿಯೋ ಕೂಡ ಹೊರಬಿದ್ದಿದೆ.
ಅವಶೇಷಗಳಡಿಯಿಂದ ಆಘಾತಕಾರಿ ಶವಗಳೇ ಹೊರ ಬರುವ ವೀಡಿಯೋಗಳ ನಡುವೆ ಇಂತಹ ಒಂದೆರಡು ಚೇತೋಹಾರಿ ಕಾರ್ಯಾಚರಣೆಯ ವೀಡಿಯೋಗಳು ಕೂಡ ಹೊರ ಬಿದ್ದಿವೆ. ಸಾವು ಸಂಖ್ಯೆಯು ಒಟ್ಟು 4,372ನ್ನು ತಲುಪಿದ್ದಾಗಿ ಟರ್ಕಿ, ಸಿರಿಯಾ ಹೇಳಿವೆ.
ಇನ್ನಷ್ಟು ಶವಗಳು ದೊರೆಯುವುದಲ್ಲದೆ 12 ವರ್ಷಗಳ ಅಂತರ್ಯುದ್ಧದ ಸಿರಿಯಾ ಪ್ರದೇಶವು ಸ್ಮಶಾನ ಸದೃಶವಾಗಿರುವ ಅಪಾಯ ಇನ್ನಷ್ಟು ಕಳವಳಕ್ಕೀಡು ಮಾಡಿದೆ.
ಅವಶೇಷಗಳ ನಡುವೆ, ಬೆಟ್ಟಗಳ ಮೇಲೆ ಸಂತ್ರಸ್ತರು ಸಹಾಯಕ್ಕಾಗಿ ಅಳುತ್ತಿರುವ ವೀಡಿಯೋಗಳು ಸಹ ಹೊರಬಿದ್ದಿವೆ. ಇದರ ನಡುವೆ ಕಡಿಮೆ ತೀವ್ರತೆಯ ಭೂಕಂಪನಗಳು ಆಗಾಗ ಆಗುತ್ತಲೇ ಇರುವುದರಿಂದ ಅಳಿದುಳಿದ ಮನೆಗಳ ಒಳಕ್ಕೆ ಹೋಗಲು ಜನರು ಭಯ ಪಡುತ್ತಿದ್ದಾರೆ. ತೀವ್ರ ಚಳಿಗಾಲವಾದುದರಿಂದ ರಕ್ಷಣಾ ಕಾರ್ಯಾಚರಣೆಗೆ ಕೆಲವೆಡೆ ತೊಡಕುಂಟು ಮಾಡಿದೆ.
ಕೆಲವು ಗಾಯಾಳುಗಳು ತಮ್ಮವರಿಗಾಗಿ ಹುಡುಕಾಡುತ್ತಿರುವ ದೃಶ್ಯ ಮನ ಕಲಕುವಂತಿದೆ. ಈ ಬಹುಭೂಕಂಪ ಈ ಶತಮಾನದಲ್ಲೇ ಬಲವಾದುದು ಎಂದೂ ಎಎಫ್’ಬಿಯಲ್ಲಿ ವರದಿಯಾಗಿದೆ. ದಕ್ಷಿಣ ಟರ್ಕಿಯಲ್ಲಿ 18 ಕಿಲೋಮೀಟರ್ ಆಳದಲ್ಲಿ ಭೂಕಂಪ ಕೇಂದ್ರವಿರುವುದು ಕಂಡುಬಂದಿದೆ.