►ಬ್ರ್ಯಾಂಡ್ ಹೆಸರಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಜಾಲ ಬೇಧಿಸಿದ ಪೊಲೀಸರು
ಕಲ್ಬುರ್ಗಿ: ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಕ್ಷೀರಭಾಗ್ಯದಡಿ ಸರಬರಾಜು ಮಾಡಲಾಗುವ ಹಾಲಿನ್ ಪ್ಯಾಕೆಟ್ ಹಾಗೂ ಪೌಡರ್ ಪ್ಯಾಕೆಟ್ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹಾಲಿನ ಪ್ಯಾಕೇಟ್ಗಳು ಹಾಗೂ ಪೌಡರನ್ನು ಪ್ಯಾಕೇಟ್ನಿಂದ ಬೇರ್ಪಡಿಸಿ ಚೀಲಕ್ಕೆ ತುಂಬಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಉಪಳಾಂವ್ ಕ್ರಾಸ್ನ ಬಳಿ ಸಬ್ ಅರ್ಬನ್ ಠಾಣೆ ಪೊಲೀಸರು ಮತ್ತು ಮಧ್ಯಾಹ್ನ ಉಪಹಾರ ಯೋಜನೆ ಅಧಿಕಾರಿಗಳು ತಡೆದು ನಿಲ್ಲಿಸಿದ್ದಾರೆ.
ತಪಾಸಣೆ ವೇಳೆ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುವ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ 6 ಕಿಂಟಾಲ್ ಮಿಲ್ಕ್ ಪೌಡರ್ ಪ್ಯಾಕೇಟ್ ಪತ್ತೆಯಾಗಿವೆ. ಆರೋಪಿಗಳಾದ ಅನಿಲ್, ಅವುಗಳನ್ನು ಖರೀದಿಸುತ್ತಿದ್ದ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೋಯಿದ್ದೀನ್ ಮತ್ತು ಗೂಡ್ಸ್ ಚಾಲಕ ಇಮ್ರಾನುದ್ದೀನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಹಾಲಿನ ಪೌಡರನ್ನು ಬೀದರ್ನ ಹುಮ್ನಾಬಾದ್ಗೆ ಸಾಗಿಸುತ್ತಿದ್ದು, ಮಾತ್ರವಲ್ಲದೇ ಹೊರ ರಾಜ್ಯಕ್ಕೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಹಲವೆಡೆ ಶಾಲೆಯ ಹೆಡ್ಮಾಸ್ಟರ್ಗಳು, ಶಿಕ್ಷಕರು ಮತ್ತು ಅಂಗನವಾಡಿ ಶಿಕ್ಷಕಿಯರು, ಸಿಬ್ಬಂದಿ ಹಾಲಿನ ಪೌಡರ್ ಪ್ಯಾಕೆಟ್ಗಳನ್ನ ಹಣಕ್ಕೆ ಸೇಲ್ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಕೆಎಂಎಫ್ನ 1 ಕೆಜಿಯ 1 ಹಾಲಿನ ಪ್ಯಾಕೇಟ್ಗೆ ಸರ್ಕಾರ 275 ರೂಪಾಯಿ ನೀಡುತ್ತದೆ. ಆದರೆ ಅಕ್ರಮ ದಂಧೆಕೋರರು ಶಾಲೆ ಸಿಬ್ಬಂದಿ ಬಳಿ 100-150 ರೂಪಾಯಿ ಕೊಟ್ಟು ಹಾಲಿನ ಪ್ಯಾಕೆಟ್ಗಳನ್ನ ಕಾಳಸಂತೆಯಲ್ಲಿ ಖರೀದಿಸುತ್ತಾರೆ.
ಇದೇ ಹಾಲಿನ ಪೌಡರ್ ಬೇರೆ ಬೇರೆ ಪ್ಯಾಕೆಟ್ ಮಾಡಿ ಬ್ರ್ಯಾಂಡ್ ಹೆಸರಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.