“ನಾವು ನಿಮಗೆ 10 ದಿನ ನೀಡುತ್ತಿದ್ದೇವೆ:” ನ್ಯಾಯಾಂಗ ನೇಮಕಾತಿ ಪೂರ್ಣಗೊಳಿಸಲು ಕೇಂದ್ರಕ್ಕೆ ಗಡುವು ನೀಡಿದ ಸುಪ್ರೀಂ

Prasthutha|

ನವದೆಹಲಿ: ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದ ಹೆಸರುಗಳನ್ನು ನೇಮಕ ಮಾಡಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆಗೆ ಶುಕ್ರವಾರ ತೀವ್ರ ಅಸಮಾಧಾನ ಹೊರಹಾಕಿರುವ ಸರ್ವೋಚ್ಚ ನ್ಯಾಯಾಲಯವು ಅಹಿತರಕರವಾದ ನ್ಯಾಯಾಂಗ ಮತ್ತು ಆಡಳಿತಾತ್ಮಕ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.

- Advertisement -

ಕೊಲಿಜಿಯಂ ಡಿಸೆಂಬರ್‌ನಲ್ಲಿ ಶಿಫಾರಸ್ಸು ಮಾಡಿರುವ ಐವರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸುವುದು ಯಾವಾಗ ಎಂದು ಅಟಾರ್ನಿ ಜನರಲ್‌ ಎನ್‌ ವೆಂಕಟರಮಣಿ ಅವರನ್ನು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಅಭಯ್‌ ಶ್ರೀನಿವಾಸ್‌ ಓಕಾ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಶ್ನಿಸಿತು.

ಇದಕ್ಕೆ ಎಜಿ ಅವರು ಶೀಘ್ರದಲ್ಲೇ ನೇಮಕಾತಿ ಮಾಡಲಾಗುವುದು ಎಂದರು. ಆಗ ಪೀಠವು “ಸುಪ್ರೀಂ ಕೋರ್ಟ್‌ಗೆ ಇದುವರೆಗೆ ಐವರು ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸ್ಸು ಮಾಡಲಾಗಿದ್ದು, ಐದು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು” ಎಂದು ಆದೇಶದಲ್ಲಿ ದಾಖಲಿಸಲು ಮುಂದಾಯಿತು.

- Advertisement -

ಆಗ ಎಜಿ ಅವರು “ಇದನ್ನು ನೀವು ದಾಖಲಿಸಬೇಕಿಲ್ಲ. ಇದು (ನೇಮಕಾತಿ) ಆಗುವುದರಲ್ಲಿದೆ ಎಂದು ನೀವು ದಾಖಲಿಸಬಹುದು” ಎಂದರು. ಇದಕ್ಕೆ ನ್ಯಾ. ಕೌಲ್‌ ಅವರು “ಇದು ಆಗುವುದರಲ್ಲೇ ಇದೆ! ಯಾವಾಗ ಆಗುತ್ತದೆ ಹೇಳಿ? ಅನೇಕ ವರ್ಷಗಳಿಂದ ಏನೂ ಆಗುತ್ತಿಲ್ಲ”‌ ಎಂದರು.

ಮುಂದುವರಿದು ಪೀಠವು ಮುಂದಿನ ಶುಕ್ರವಾರದ ವೇಳೆಗೆ ಎಜಿ ಅವರು ಶುಭ ಸುದ್ದಿ ನೀಡುತ್ತಾರೆ ಎಂಬ ಭರವಸೆ ಹೊಂದೋಣ ಎಂದಿತು. ಆಗ ವೆಂಕಟರಮಣಿ ಅವರು ಹೆಚ್ಚಿನ ಕಾಲಾವಕಾಶ ಕೋರಿದರು.

ಆಗ ಪೀಠವು “ಸರಿ, ಹತ್ತು ದಿನಗಳನ್ನು ನೀಡಲಾಗುವುದು. ಸುಪ್ರೀಂ ಕೋರ್ಟ್‌ಗೆ ಐವರು ನ್ಯಾಯಮೂರ್ತಿಗಳ ನೇಮಕ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ವರ್ಗಾವಣೆ ವಿಚಾರಕ್ಕೆ ನಿಮ್ಮ ಮಾತು ಪರಿಗಣಿಸಲಾಗುವುದು. ಈ ವಿಚಾರದಲ್ಲಿ ನಿಮಗೆ ಹತ್ತು ದಿನ ನೀಡುತ್ತೇವೆ” ಎಂದು ನ್ಯಾ. ಕೌಲ್‌ ಹೇಳಿದರು.

“ವರ್ಗಾವಣೆ ಆದೇಶವನ್ನು ಜಾರಿಗೊಳಿಸದಿದ್ದರೆ, ನಾವು ಏನು ಮಾಡಬೇಕು? ಅವರಿಂದ ನಾವು ಕೆಲಸ ಹಿಂಪಡೆಯಬೇಕೆ? ಇದು ನಮಗೆ ಗಂಭೀರ ವಿಚಾರವಾಗಿದೆ. ಕೆಲ ಗಂಭೀರ ತೀರ್ಮಾನ ಮಾಡಲು ನೀವು ಪ್ರೇರೇಪಿಸುತ್ತಿದ್ದೀರಿ. ಹೊಸ ನೇಮಕಾತಿಗಳ ಬಗ್ಗೆ ನಿಮಗೆ ಕೆಲವು ವಿಚಾರ ಹೇಳುವುದಕ್ಕಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ, ವರ್ಗಾವಣೆಗಳ ವಿಚಾರದಲ್ಲಿ ಏನು ಹೇಳಲು ಇದೆ? ಇದು ಗಂಭೀರ ವಿಚಾರ” ಎಂದರು.

ಪ್ರಕರಣ ವಿಚಾರಣೆ ಮುಂದೂಡುವಂತೆ ಎಜಿ ಕೋರಿದಾಗ ಪೀಠವು “ವರ್ಗಾವಣೆ ವಿಚಾರದಲ್ಲಿ ವಿಳಂಬ ಮಾಡುವುದು ನ್ಯಾಯಾಲಯವು ಆಡಳಿತಾತ್ಮಕ ಮತ್ತು ನ್ಯಾಯಿಕ ಕ್ರಮಕ್ಕೆ ಮುಂದಾಗಲು ದಾರಿ ಮಾಡಿಕೊಡಲಿದ್ದು, ಅದು ಹಿತಕರವಾಗಿರುವುದಿಲ್ಲ” ಎಂದು ಎಚ್ಚರಿಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್ ಅವರು “ಕೊಲಿಜಿಯಂ (ನ್ಯಾಯಮೂರ್ತಿಗಳ ಶಿಫಾರಸ್ಸನ್ನು) ಪುನರುಚ್ಚರಿಸಿದ ಮೇಲೆ ಸರ್ಕಾರಕ್ಕೆ ಮತ್ತೇನೂ ಅವಕಾಶ ಇರುವುದಿಲ್ಲ! ಸರ್ಕಾರವು ಪದೇ ಪದೇ ಅದನ್ನು (ಕೊಲಿಜಿಯಂಗೆ) ಮರಳಿಸಲಾಗದು” ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ವಾರದ ಬಳಿಕ ನಡೆಸುವುದಾಗಿ ಹೇಳಿತು.

(ಕೃಪೆ: ಬಾರ್ & ಬೆಂಚ್)



Join Whatsapp