ಹೊಸದಿಲ್ಲಿ: ಕೇರಳದ ಹಿರಿಯ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಎರಡು ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದು, ತಾಯಿ ಇಲ್ಲದ ನೋವಿನೊಂದಿಗೆ ತಾಯ್ನಾಡಿಗೆ ಹೊರಟಿದ್ದಾರೆ.
ಉತ್ತರಪ್ರದೇಶದ ಲಕ್ನೋ ಜೈಲಿನಿಂದ ಇಂದು ಬೆಳಗ್ಗೆ ಬಿಡುಗಡೆಯಾದ ಕಾಪ್ಪನ್, ಸುದ್ದಿಗಾರರೊಂದಿಗೆ ಮಾತನಾಡಿ, ತಾಯಿ ಈ ಭೂಮಿಯಲ್ಲಿ ಇಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ಸತ್ಯಕ್ಕೆ ಯಾವತ್ತೂ ಜಯಸಿಗಲಿದೆ. ಮಹಾತ್ಮ ಗಾಂಧಿ, ಭಗತ್ ಸಿಂಗ್ ಅವರನ್ನೂ ಭಯೋತ್ಪಾದಕ ಎಂದು ಕರೆಯಲಾಗಿತ್ತು. ಒಂದೊಂದು ಕಾಲದಲ್ಲಿ ಒಬ್ಬೊಬ್ಬರನ್ನು ಭಯೋತ್ಪಾದಕ ಎಂದು ಗುರಿಪಡಿಸಲಾಗುತ್ತಿದೆ. ಈ ಹೆಸರಿನಲ್ಲಿ ಯಾರನ್ನೂ ಯಾವ ಹೋರಾಟವನ್ನೂ ಸದೆಬಡಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ತನ್ನ ವಿರುದ್ಧದ 2 ಪ್ರಕರಣಗಳಲ್ಲಿ ಜಾಮೀನು ಪಡೆದ ತಿಂಗಳಿಗೂ ಹೆಚ್ಚು ಸಮಯದ ನಂತರ ಲಕ್ನೋದ ವಿಶೇಷ ನ್ಯಾಯಾಲಯವು ಅವರನ್ನು ಬಿಡುಗಡೆಗೊಳಿಸುವ ಆದೇಶಕ್ಕೆ ಸಹಿ ಹಾಕಿದೆ.
ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ 2022ರ ಡಿಸೆಂಬರ್ 23ರಂದು ಪಿಎಂಎಲ್‌ಎ ಪ್ರಕರಣದಲ್ಲಿ ಕಾಪ್ಪನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.