ಚಂದಮಾಮ ತೋರಿಸುವ ಬಜೆಟ್: ಎಂ.ಎಸ್. ರಕ್ಷಾ ರಾಮಯ್ಯ ಟೀಕೆ

Prasthutha|

ಬೆಂಗಳೂರು: ನಿರುದ್ಯೋಗ ಸಮಸ್ಯೆ ನಿವಾರಣೆ, ಉದ್ಯೋಗ ಸೃಷ್ಟಿಗೆ ಯಾವುದೇ ಪರಿಹಾರವಿಲ್ಲ. ಜನ ಸಾಮಾನ್ಯರನ್ನು ಬೆಲೆ ಏರಿಕೆಯಂತಹ ಸಂಕಟದಿಂದ ರಕ್ಷಿಸಲು ಕೇಂದ್ರ ಬಜೆಟ್ ನಲ್ಲಿ ಯಾವುದೇ ರಚನಾತ್ಮಕ ಕ್ರಮಗಳನ್ನು ಪ್ರಕಟಿಸಿಲ್ಲ ಎಂದು ಯುವ ಕಾಂಗ್ರೆಸ್’ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಟೀಕಿಸಿದ್ದಾರೆ.

- Advertisement -

ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಅಮೃತ ಕಾಲಕ್ಕೆ ಪ್ರವೇಶಿಸಿದ್ದು, ಇಂತಹ ಸಂದರ್ಭದಲ್ಲಿ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಲು ಬಜೆಟ್ ನಲ್ಲಿ ಸೂಕ್ತ ಕ್ರಮಗಳನ್ನು ಪ್ರಕಟಿಸಿಲ್ಲ. ಆದರೆ ಬಜೆಟ್ ನಲ್ಲಿ ಚಂದಮಾಮನನ್ನು ತೋರಿಸುವುದಾಗಿ ಹೇಳಿದ್ದಾರೆ. ವಾಸ್ತವವಾಗಿ ಈ ಬಜೆಟ್ ನಲ್ಲಿ ಚಂದ್ರನೂ ಇಲ್ಲ, ನಕ್ಷತ್ರಗಳೂ ಇಲ್ಲ, ಕಾರ್ಮೋಡ ಕವಿದಿದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಬಜೆಟ್ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಇತಿಹಾಸದಲ್ಲಿ ಹಿಂದೆಂದೂ ಇಲ್ಲದಷ್ಟು ನಿರುದ್ಯೋಗ ಸಮಸ್ಯೆ ಇರುವಾಗ ದೊಡ್ಡ ಮಟ್ಟದಲ್ಲಿ ಸರ್ಕಾರಿ ನೇಮಕಾತಿಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಬಹುತೇಕ ಕಂಪೆನಿಗಳು ಉದ್ಯೋಗಿಗಳನ್ನು ಮನಸೋ ಇಚ್ಚೆ ಉದ್ಯೋಗದಿಂದ ತೆಗೆದುಹಾಕುತ್ತಿದ್ದು, ಉದ್ಯೋಗ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಪ್ರಕಟಿಸಬಹುದಿತ್ತು. ಮೂಲ ಸೌಕರ್ಯ ಕ್ಷೇತ್ರದ ಮೂಲಕ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಉದ್ಯೋಗ ಸೃಜನೆಗೆ ನಿರ್ದಿಷ್ಟ ಕಾರ್ಯಕ್ರಮಗಳಿಲ್ಲ. ಇಂತಹ ಕಾಲಘಟ್ಟದಲ್ಲಿ ಕನಿಷ್ಠ ಪಕ್ಷ  ಉದ್ಯೋಗ ಖಾತ್ರಿ ಯೋಜನೆಯನ್ನಾದರೂ ಬಲಪಡಿಸಬಹುದಾಗಿತ್ತು. ಆದರೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಈ ಯೋಜನೆಗೆ ಶೇ 33 ರಷ್ಟು ಅನುದಾನ ಕಡಿತ ಮಾಡಲಾಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಕ್ರಮಗಳಿಲ್ಲ. ಬೆಲೆ ಏರಿಕೆ ಸಮಸ್ಯೆಯಾಗಿಯೇ ಮುಂದುವರೆದಿದೆ ಎಂದಿದ್ದಾರೆ.

- Advertisement -

ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೂಕ್ತ ಅನುದಾನ ಮೀಸಲಿಟ್ಟಿಲ್ಲ. ಚುನಾವಣೆ ಎದುರಾಗಿರುವ ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ ಅಲ್ಪ ಪ್ರಮಾಣದ ಅನುದಾನ ಘೋಷಿಸಿರುವುದು ಬಿಟ್ಟರೆ ಬೇರೆ ಯಾವುದೇ ಕೊಡುಗೆ ನೀಡಿಲ್ಲ. ಕೇವಲ ಘೋಷಣೆಗಳು, ಪೊಳ್ಳು ಭರವಸೆಗಳ ಮೂಲಕ ಜನರನ್ನು ಹಾದಿ ತಪ್ಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಎಂ.ಎಸ್. ರಕ್ಷಾ ರಾಮಯ್ಯ ಟೀಕಿಸಿದ್ದಾರೆ.



Join Whatsapp