ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡುವ ಕಾರ್ಯಕ್ರಮವನ್ನೂ ಸರಿಯಾಗಿ ಮಾಡದೆ, ಹೈಕೋರ್ಟ್’ನಿಂದ ಛೀಮಾರಿ ಹಾಕಿಸಿಕೊಳ್ಳುವ ಮಟ್ಟಕ್ಕೆ ಇಳಿಯಿತೆ ನಿಮ್ಮ ಬಿಜೆಪಿ, ಮುಖ್ಯಮಂತ್ರಿ ಬೊಮ್ಮಾಯಿ ಅವರೆ ? ಧಮ್ಮು-ತಾಕತ್ತು ಎಂದು ಭಾಷಣಗೈಯುವ ತಮಗೆ ಅಗತ್ಯ ಸಮವಸ್ತ್ರ ಪೂರೈಸುವ ಪರಿಜ್ಞಾನವಿಲ್ಲದೆ ಹೋಯಿತೆ? ಎಂದು ಜೆಡಿಎಸ್ ಕುಟುಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಎರಡು ಜತೆ ಸಮವಸ್ತ್ರ, ಒಂದು ಜತೆ ಶೂ ಮತ್ತು ಎರಡು ಜತೆ ಸಾಕ್ಸ್ ನೀಡುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸರಿಯಾಗಿ ನಿರ್ವಹಿಸಲು ಆಗದ ಕೆಟ್ಟ ಸರ್ಕಾರವಿದು. ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೆ, ಸರ್ಕಾರಿ ಶಾಲಾ ಮಕ್ಕಳ ವಿಷಯವೆಂದರೆ ಅಷ್ಟು ಸದರವೆ? ನ್ಯಾಯಾಂಗ ನಿಂದನೆಯ ಜತೆಗೆ ಈ ಉದಾಸೀನ ಧೋರಣೆ ಖಂಡನೀಯ ಎಂದು ಹೇಳಿದೆ.
ಉತ್ಸವ ಮಾಡಿ ‘ಧಮ್ಮು-ತಾಕತ್ತಿನ’ ಪ್ರದರ್ಶನ ಮಾಡುವುದಕ್ಕೆ ಶಕ್ತಿ-ಯುಕ್ತಿ ವ್ಯಯ ಮಾಡುವುದೇ ಸಾಧನೆ ಮಾಡಿಕೊಂಡಿರುವ ಈ ಬಿಜೆಪಿ ಸರ್ಕಾರಕ್ಕೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡು, ಹಿಂದೆ ನೀಡಿದ ಆದೇಶವನ್ನು ಎರಡು ವಾರದಲ್ಲಿ ಪಾಲಿಸುವಂತೆ ಸೂಚಿಸಿದೆ. ಈ ದೆಸೆಯಲ್ಲಾದರೂ ಮಾನ-ಮರ್ಯಾದೆ ಇಲ್ಲದ ಆಡಳಿತಕ್ಕೆ ಬಿಸಿ ಮುಟ್ಟಲೇಬೇಕಿತ್ತು.
“ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು” ಎಂದ ಕುಮಾರವ್ಯಾಸನ ಸಾಲುಗಳಂತೆ ಇಡೀ ಆಡಳಿತವು ಜನತೆಯ ರಕ್ತ ಹೀರುವ ಜಿಗಣೆಯಂತಾಗಿದೆ. ಜನತೆಯ ಆಕ್ರೋಶದ ಉರಿಗೆ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಸುಟ್ಟುಹೋಗುವುದು ಖಚಿತ ಎಂದು ಜೆಡಿಎಸ್ ಹೇಳಿದೆ.