ಬೆಂಗಳೂರು: ಅಪಹರಿಸಲ್ಪಟ್ಟು ಕೊಲೆಗೀಡಾದ ವ್ಯಕ್ತಿಯ ಮೃತದೇಹ ಪತ್ತೆಹಚ್ಚುವಲ್ಲಿ ಯಶವಂತಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮತ್ತಿಕೆರೆ ನಿವಾಸಿ ಗೋವಿಂದರಾಜು (19)ಕೊಲೆಯಾದ ವ್ಯಕ್ತಿ. ಈತ ತನ್ನ ಕುಟುಂಬದ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದ. ಇದನ್ನು ಸಹಿಸದ ಕುಟುಂಬದ ಅನಿಲ್ ಕುಮಾರ್,ಭರತ್ ಮತ್ತಿತರ ಇಬ್ಬರು ಆರೋಪಿಗಳು ಕಳೆದ ಸೋಮವಾರ ಮತ್ತಿಕೆರೆಯಿಂದ ಗೋವಿಂದರಾಜನನ್ನು ಅಪಹರಿಸಿ ರಾಜ್ ಗೋಪಾಲ್ ನಗರದ ಅಂದರಳ್ಳಿಯಲ್ಲಿ ಕೊಲೆ ಮಾಡಿ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಮಲಯಮಾರುತದ ಬಳಿ ವಾಹನದಲ್ಲಿ ದೇಹ ತಂದು ಬಿಸಾಕಿ ಪರಾರಿಯಾಗಿದ್ದರು.
ಕುಟುಂಬದವರು ಗೋವಿಂದರಾಜು ಕಾಣೆಯಾಗಿರುವ ಬಗ್ಗೆ ಯಶವಂತಪುರ ಠಾಣೆಗೆ ದೂರು ನೀಡಿದ್ದರು.ಕುಟುಂಬದವರಿಗೆ ಅನಿಲ್ ಕುಮಾರ್ ಮೇಲೆ ಅನುಮಾನವಿದ್ದರಿಂದ ಪೊಲೀಸರು ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭರತ್ ಮತ್ತಿತರ ಇಬ್ಬರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದು ಬುಧವಾರ ಆರೋಪಿಗಳನ್ನು ಚಾರ್ಮಾಡಿ ಘಾಟಿಗೆ ಕರೆ ತಂದು ಯಶವಂತಪುರ ಠಾಣೆಯ ಸಬ್ ಇನ್ ಸ್ಪೆಕ್ಟರ್ ಮಹೇಶ್ ಅವರ ತಂಡ ಸ್ಥಳೀಯ ಸಮಾಜ ಸೇವಕರ ಜತೆ ಸೇರಿ ಮೃತದೇಹವನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ.