ನವದೆಹಲಿ: ಗೌತಮ್ ಅದಾನಿ ಅವರು ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಕೆಳಗಿಳಿದಿದ್ದು, ‘ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್’ನಲ್ಲಿ ನಾಲ್ಕನೇ ಸ್ಥಾನದಿಂದ 11 ನೇ ಸ್ಥಾನಕ್ಕೆ ಉದ್ಯಮಿ ಅದಾನಿ ಕುಸಿದಿದ್ದಾರೆ.
ಬಿಲಿಯನೇರ್ ಗಳ ಪಟ್ಟಿಯಲ್ಲಿ ಅದಾನಿ ಈಗ ಮೆಕ್ಸಿಕೋದ ಕಾರ್ಲೋಸ್ ಸ್ಲಿಮ್, ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಮತ್ತು ಮೈಕ್ರೋಸಾಫ್ಟ್ ಮಾಜಿ ಸಿಇಒ ಸ್ಟೀವ್ ಬಾಲ್ಮರ್ ಅವರಿಗಿಂತ ಕೆಳಗೆ ಕುಸಿದಿದ್ದಾರೆ.
ಸದ್ಯ 84.4 ಶತಕೋಟಿ ಡಾಲರ್ (6.89 ಲಕ್ಷ ಕೋಟಿ) ಸಂಪತ್ತನ್ನು ಹೊಂದಿರುವ ಅದಾನಿ ಈಗ ತಮ್ಮ ಪ್ರತಿಸ್ಪರ್ಧಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿಯವರಿಗಿಂತಲೂ (82.2 ಶತಕೋಟಿ ಡಾಲರ್ –6.71 ಲಕ್ಷ ಕೋಟಿ) ಸ್ವಲ್ಪ ಮುಂದಿದ್ದಾರೆ.
ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿವೆ. ಹೀಗೇ ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಕುಸಿಯುತ್ತಾ ಸಾಗಿದರೆ, ಶೀಘ್ರದಲ್ಲೇ ಅವರು ಏಷ್ಯಾದ ಶ್ರೀಮಂತ ವ್ಯಕ್ತಿಯ ಪಟ್ಟದಿಂದಲೂ ಕೆಳಗಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.
ಹಿಂಡನ್ ಬರ್ಗ್ ವರದಿ ಪ್ರಕಟವಾದ ನಂತರದಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರುಗಳು ನಿರಂತರವಾಗಿ ಕುಸಿಯುತ್ತಲೇ ಸಾಗಿವೆ. ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತ ಉಂಟಾಗಿರುವುದರಿಂದ ಎಲ್ಐಸಿ ಹಾಗೂ ಎಸ್ಬಿಐಗೆ 78 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ನಷ್ಟವಾಗಿದೆ.