ಅಡ್ಡಹೊಳೆ- ಬಿ.ಸಿ. ರೋಡ್’ವರೆಗೆ 4 ಪಥಗಳ ಕಾಂಕ್ರೀಟ್ ರಸ್ತೆ ಅಭಿವೃದ್ಧಿಗೆ 1418 ಕೋಟಿ ಅನುದಾನ: ಸಚಿವ ಸುನೀಲ್ ಕುಮಾರ್

Prasthutha|

ಮಂಗಳೂರು: ಗುಂಡ್ಯದ ಅಡ್ಡಹೊಳೆಯಿಂದ ಬಿಸಿ ರೋಡಿನವರೆಗೆ ಒಟ್ಟು 63 ಕಿ.ಮೀ ಉದ್ದದ 4 ಪಥಗಳ ಕಾಂಕ್ರೀಟ್ ರಸ್ತೆ ಅಭಿವೃದ್ಧಿಗೊಳಿಸಲು ರೂ. 1418 ಕೋಟಿ ಮೊತ್ತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಗಲೇ ಶೇ. 25 ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

- Advertisement -


ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದರು.
ಕರ್ನಾಟಕ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ 7 ಹೊಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ರೂ 1040 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಎಂಬ ಧ್ಯೇಯೋದೇಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಹಂತಗಳಲ್ಲಿ ಒಟ್ಟು ರೂ. 576 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


ಒಣ ಕಸವನ್ನು ವೈಜ್ಞಾನಿಕವಾಗಿ ಮತ್ತು ಸಮರ್ಪಕವಾಗಿ ನಿರ್ವಹಣೆ ಮಾಡುವ ದೃಷ್ಟಿಯಿಂದ ಸ್ವಚ್ಛ ಭಾರತ ಮೀಷನ್’ನಡಿಯಲ್ಲಿ ರೂ. 3 ಕೋಟಿ ವೆಚ್ಚದಲ್ಲಿ ಸಮಗ್ರ ಒಖಈ ಘಟಕವನ್ನು ನಿರ್ಮಿಸಿದ್ದು, ಸದ್ರಿ ಘಟಕವನ್ನು ಇಂದು ಉದ್ಘಾಟನೆ ಮಾಡಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಇತರೆ ಇಲಾಖೆಗಳನ್ನೊಳಗೊಂಡಂತೆ ಅಧಿಕಾರಿ ಮತ್ತು ಇತರೆ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲು ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರವನ್ನು ರೂ. 1.5 ಕೋಟಿ ವೆಚ್ಚದಲ್ಲಿ ಮಂಗಳೂರು ತಾಲೂಕು ಅಡ್ಯಾರು ಇಲ್ಲಿ ನಿರ್ಮಿಸಲಾಗಿದ್ದು, ಸದರಿ ತರಬೇತಿ ಕೇಂದ್ರವನ್ನು ಸಹ ಈದಿನ ಉದ್ಘಾಟನೆ ಮಾಡಲಾಗುತ್ತಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಮತ್ತು ನಿರ್ವಹಣೆಗಾಗಿ ರೂ. 92 ಕೋಟಿ ಮೊತ್ತವನ್ನು ಮಂಜೂರು ಮಾಡಲಾಗಿದೆ. ನೂತನವಾಗಿ ಸ್ಥಾಪಿತವಾದ ಮೂಡಬಿದ್ರೆ ತಾಲೂಕು ಕಟ್ಟಡಕ್ಕೆ ರೂ. 5.35 ಕೋಟಿ ಮಂಜೂರಾಗಿರುತ್ತದೆ ಹಾಗೂ ಕಡಬ ತಾಲೂಕಿಗೆ ರೂ. 4.50 ಕೋಟಿ ಅನುದಾನದಡಿಯಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.

- Advertisement -


ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶೌಚಾಲಯಗಳಲ್ಲಿ ಉತ್ಪತ್ತಿಯಾಗುವ ಬೂದು ನೀರು ಮತ್ತು ಕಪ್ಪು ನೀರನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಬಂಟ್ವಾಳ ತಾಲೂಕಿನ ಗೋಳ್ತಮಜಲಿನಲ್ಲಿ ಮತ್ತು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಮಲತ್ಯಾಜ್ಯ ಘಟಕವನ್ನು ನಿರ್ಮಿಸಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಗ್ರಾಮ ಪಂಚಾಯತ್, ಅಮೃತ ಅಂಗನವಾಡಿ, ಅಮೃತ ಆರೋಗ್ಯ, ಅಮೃತ ಶಾಲೆ, ಅಮೃತ ಸ್ವಸಹಾಯ ಈ ಶೀರ್ಷಿಕೆಯಡಿ ಜಿಲ್ಲೆಗೆ ಸುಮಾರು ಒಟ್ಟು ರೂ. 8 ಕೋಟಿ ಮೊತ್ತವನ್ನು ಬಿಡುಗಡೆಗೊಳಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ಯೋಜನೆಯಡಿ ಜಿಲ್ಲೆಯ 1,39,992 ರೈತರಿಗೆ ಒಟ್ಟು ರೂ. 128.00 ಕೋಟಿ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗಿರುತ್ತದೆ. ಮುಖ್ಯ ಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ 37,000 ವಿದ್ಯಾರ್ಥಿಗಳಿಗೆ ರೂ. 18.02 ಕೋಟಿ ಮೊತ್ತವನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗಿದೆ. ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ಯೋಜನೆಯಡಿ ಜಿಲ್ಲೆಯಲ್ಲಿ 66 ಉದ್ದಿಮೆಗಳಿಗೆ ರೂ. 8.83 ಕೋಟಿ ಮೊತ್ತದ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ಸುನೀಲ್ ಕುಮಾರ್ ಹೇಳಿದರು.


ಗುಣಮಟ್ಟದ ಶಿಕ್ಷಣವನ್ನು ನೀಡುವ ದೃಷ್ಟಿಯಿಂದ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ವಿವೇಕ ಶಾಲೆಗಳ ಯೋಜನೆಯಡಿ 275 ಕೊಠಡಿಗಳಿಗೆ ರೂ. 39.32 ಕೋಟಿ ಅನುದಾನವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ. ಶಾಲೆಗಳ ದುರಸ್ತಿಗಾಗಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ತಲಾ ರೂ. 50 ಲಕ್ಷದಂತೆ ರೂ. 4 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ ಹಾಗೂ ಪ್ರಾಕೃತಿಕ ವಿಕೋಪ ಪರಿಹಾರ ಅನುದಾನದಡಿ 289 ಪ್ರಾಥಮಿಕ ಶಾಲೆಗಳ ದುರಸ್ತಿಗಾಗಿ ರೂ. 5.54 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ದೃಷ್ಟಿಯಿಂದ ಒಟ್ಟು ರೂ. 8 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.


ಆರೋಗ್ಯ ಸೇವೆಗಳು ಮನೆಯ ಬಾಗಿಲಿನಲ್ಲೇ ದೊರಕಬೇಕು ಎನ್ನುವ ಉದ್ದೇಶದಿಂದ ನಮ್ಮ ಕ್ಲಿನಿಕ್ ಯೋಜನೆಯನ್ನು ನಮ್ಮ ಸರ್ಕಾರ ಅನುಷ್ಠಾನಗೊಳಿಸಿದ್ದು, ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ನಮ್ಮ ಕ್ಲಿನಿಕ್’ಗಳನ್ನು ಸ್ಥಾಪಿಸಲಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಸುಮಾರು 33,000 ಫಲಾನುಭವಿಗಳು ರೂ. 65.63 ಕೋಟಿ ಮೊತ್ತವನ್ನು ಫಲಾನುಭವಿಗಳ ವೈದ್ಯಕೀಯ ವೆಚ್ಚವನ್ನು ಬಳಸಲಾಗಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗದಲ್ಲಿ 60 ಬೆಡ್’ಗಳ ಸಾಮರ್ಥ್ಯ ಇರುವ ಸುಮಾರು ರೂ. 12 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ಮಾಣಗೊಂಡಿದೆ.
ವೆನ್’ಲಾಕ್ ಆಸ್ಪತ್ರೆಯಲ್ಲಿ 10 ಮಾಡ್ಯುಲಾರ್ ಒ.ಟಿ ಗಳನ್ನೊಳಗೊಂಡಂತೆ ಹೊಸ ಸರ್ಜಿಕಲ್ ಬ್ಲಾಕ್’ ಅನ್ನು ರೂ. 39.00 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿದೆ. ವೆನ್’ಲಾಕ್ ಆಸ್ಪತ್ರೆಯಲ್ಲಿ 30 ಬೆಡ್’ಗಳ ಸಾಮರ್ಥ್ಯವಿರುವ ಡಯಾಲಿಸಿಸ್ ನೀಡಲು ರೂ. 2 ಕೋಟಿ ವೆಚ್ಚದಲ್ಲಿ ಡಯಾಲಿಸಿಸ್ ವಿಭಾಗವನ್ನು ನಿರ್ಮಿಸಲಾಗುತ್ತಿದೆ.ಕೈಗಾರಿಕೆಗಳನ್ನು ಬಲಪಡಿಸಲು ಮತ್ತು ಅಭಿವೃದ್ಧಿಗೆ ಶಕ್ತಿಯನ್ನು ನೀಡಲು ಹೊಸ ಕೈಗಾರಿಕಾ ನೀತಿಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.


ಬಹು ನಿರೀಕ್ಷಿತ ಪ್ಲಾಸ್ಟಿಕ್ ಪಾರ್ಕ್’ನ್ನು ಮಂಗಳೂರಿನ ಗಂಜಿಮಠದಲ್ಲಿ 104 ಎಕ್ರೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆ ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿರುವುದರಿಂದ ರಾಜ್ಯಕ್ಕೆ 2ನೇ ಸ್ಥಾನದ ಪ್ರಶಸ್ತಿ ಪಡೆದಿರುವುದು ಅಭಿನಂದನೀಯ. ಕರ್ನಾಟಕದಲ್ಲಿ ಐ.ಟಿ ಉದ್ಯಮವು ಹೆಚ್ಚಾಗಿ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದೆ. ಬೆಂಗಳೂರಿನಾಚೆ ಶ್ರೇಣಿ 2 ರ ನಗರಗಳಲ್ಲಿ ಐ.ಟಿ ಉದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಸರಕಾರವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ 2022 ರ ಡಿಸೆಂಬರ್ 16 ಹಾಗೂ 17 ರಂದು ಮಂಗಳೂರಿನಲ್ಲಿ 2ನೇ ಆವೃತ್ತಿಯ “ಮಂಗಳೂರು ಟೆಕ್ನೋವಾಂಝಾ” ಕಾರ್ಯಕ್ರಮವನ್ನು ನಡೆಸಿದ್ದು ಐ.ಟಿ ಉದ್ಯಮಿಗಳಿಗಾಗಿ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗಿದೆ. ಇದರಿಂದ ಅಭಿವೃದ್ಧಿಯನ್ನು ಸಮಾನಂತರವಾಗಿ ತೆಗೆದುಕೊಂಡು ಹೋಗಲು ಮತ್ತು ಭಾರಿ ಪ್ರಮಾಣದ ಉದ್ಯೋಗ ಸೃಷ್ಟಿಸಲು ಈ ಒಂದು ಕಾರ್ಯಕ್ರಮ ಉಪಯೋಗವಾಗಿದೆ ಎಂದು ಹೇಳಿದರು.


ಬೆಳಕು ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 6300 ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ ಹಾಗೂ 2039 ವಿಫಲಗೊಂಡ ವಿತರಣಾ ಪರಿವರ್ತಕಗಳನ್ನು 24 ಗಂಟೆಯೊಳಗೆ ಬದಲಾಯಿಸಲಾಗಿದೆ ಮತ್ತು ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ಗೆ ಅನುಕೂಲವಾಗುವಂತೆ 18 ಚಾರ್ಜಿಂಗ್ ಪಾಯಿಂಟ್ ಗಳನ್ನು ಅಳವಡಿಸಲಾಗಿದೆ.


ಮೂಡಬಿದ್ರೆ ತಾಲೂಕಿನ ಶಿರ್ತಾಡಿಯಲ್ಲಿ 33/11 ಕೆ.ವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಮಾಡಲು ಚಿಂತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 456 ಕಿ.ಮೀ 11 ಕೆ.ವಿ ಲೈನನ್ನು ವಿಸ್ತರಿಸಲಾಗಿರುತ್ತದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಮಂಗಳೂರಿನಲ್ಲಿ ವಿ.ವಿ.ಐ.ಪಿ ಗೆಸ್ಟ್ ಹೌಸ್ಗಾಗಿ ರೂ. 5 ಕೋಟಿ, ಮುಲ್ಕಿ ಪ್ರವಾಸ ಮಂದಿರ ನಿರ್ಮಾಣಕ್ಕಾಗಿ ರೂ. 2 ಕೋಟಿ, ಸುಳ್ಯ ಪ್ರವಾಸ ಮಂದಿರ ನಿರ್ಮಾಣಕ್ಕಾಗಿ ರೂ. 2 ಕೋಟಿ, ಮೂಡಬಿದ್ರೆ ಪ್ರವಾಸ ಮಂದಿರ ನಿರ್ಮಾಣಕ್ಕಾಗಿ ರೂ. 4 ಕೋಟಿ ಮೊತ್ತವನ್ನು ಮಂಜೂರು ಮಾಡಲಾಗಿದೆ. ಪುತ್ತೂರು ತಾಲೂಕಿನಲ್ಲಿ ಕೋರ್ಟ್ ಕಟ್ಟಡ ನಿರ್ಮಿಸಲು ರೂ. 25.00 ಕೋಟಿ ಮೊತ್ತಕ್ಕೆ ಮಂಜೂರು ನೀಡಲಾಗಿರುತ್ತದೆ. ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯ ಹೆಚ್ಚಿಸಲು ಸಂಪರ್ಕ ಸೇತುವೆ ನಿರ್ಮಿಸಲು ಗ್ರಾಮಬಂಧು ಸೇತುವೆ ಯೋಜನೆಯಡಿ ರೂ. 33.65 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೀಮ್ಡ್ ಫಾರಸ್ಟ್ಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಸಮಸ್ಯೆಯನ್ನು ಬಗೆಹರಿಸಲು ಪುನರ್ರಚಿತ ತಜ್ಞರ ಸಮಿತಿಯ ವರದಿ ಪ್ರಕಾರ ಜಿಲ್ಲೆಯಲ್ಲಿ 34850 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ಕೈಬಿಡಲು ಕ್ರಮವಹಿಸಲಾಗುತ್ತಿದೆ. ಸರ್ಕಾರಿ ಜಾಗದಲ್ಲಿ ಅನಧೀಕೃತವಾಗಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಜನರಿಗೆ ಸಕ್ರಮ ಮಾಡಲು 94ಸಿ ರಡಿ 53,049 ಮತ್ತು 94ಸಿಸಿ ರಡಿ 25,943 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಹೇಳಿದರು.


ಅಡ್ಡಹೊಳೆಯಿಂದ ಬಿಸಿ ರೋಡಿನವರೆಗೆ ಒಟ್ಟು 63 ಕಿ.ಮೀ ಉದ್ದದ 4 ಪಥಗಳ ಕಾಂಕ್ರೀಟ್ ರಸ್ತೆ ಅಭಿವೃದ್ಧಿಗೊಳಿಸಲು ರೂ. 1418.00 ಕೋಟಿ ಮೊತ್ತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಗಲೇ ಶೇ. 25 ರಷ್ಟು ಕಾಮಗಾರಿ ಮುಕ್ತಾಯಗೊಂಡಿರುತ್ತದೆ. ಮುಖ್ಯ ಮಂತ್ರಿಗಳು ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಪ್ರತಿಯೊಂದು ಗ್ರಾಮ ಪಂಚಾಯತ್’ಗೆ ಒಂದರಂತೆ ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪುಗಳನ್ನು ರಚನೆ ಮಾಡುವ ಸಂಬಂಧ ಜಿಲ್ಲೆಯಲ್ಲಿ 223 ಸ್ವಾಮಿ ವಿವೇಕಾನಂದ ಸ್ವಸಹಾಯ ಸಂಘಗಳನ್ನು ರಚನೆ ಮಾಡಲಾಗಿರುತ್ತದೆ. ಸದರಿ ಸಂಘದ ಸದಸ್ಯರು ಸ್ವಯಂ ಉದ್ಯೋಗ ಕೈಗೊಳ್ಳಲು ರೂ. 1 ಲಕ್ಷದಿಂದ ಗರಿಷ್ಠ 5 ಲಕ್ಷದವರೆಗೆ ಸಹಾಯಧನ ನೀಡಲಾಗುವುದು. ಮಂಗಳೂರು ಸ್ಮಾರ್ಟ್ಸಿಟಿ ಯೋಜನೆಯಡಿ ರೂ. 10 ಕೋಟಿ ವೆಚ್ಚದಲ್ಲಿ ಮಂಗಳಾ ಕ್ರೀಡಾಂಗಣ ಅಭಿವೃದ್ಧಿಯನ್ನು ಪೂರ್ಣಗೊಳಿಸಲಾಗಿದೆ. ಎಮ್ಮೆಕೆರೆಯ ಅಂತರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ರೂ. 24 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿರುತ್ತದೆ ಹಾಗೂ ಉರ್ವಾ ಮಾರ್ಕೆಟ್ ಬಳಿ ಕಬ್ಬಡಿ ಮತ್ತು ಬ್ಯಾಡ್’ಮಿಟನ್ ಅಂಕಣ ನಿರ್ಮಾಣ ಮಾಡಲು ರೂ. 20 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸುನೀಲ್ ಕುಮಾರ್ ಹೇಳಿದರು.


ಗ್ರಾಮ ಒನ್ ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾಗಿರುತ್ತದೆ. ಕರ್ನಾಟಕ ಸರ್ಕಾರವು ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರು ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ “ಗ್ರಾಮ ಒನ್” ಮೂಲಕ ಹಳ್ಳಿಗರಿಗೂ ಸೇವೆ ನೀಡಬೇಕೆಂಬ ಯೋಜನೆ ರೂಪಿಸಿದ್ದು, ಸೇವಾಸಿಂಧು ಯೋಜನೆಯಡಿಯಲ್ಲಿ ಗ್ರಾಮೀಣ ಭಾಗಗಳಲ್ಲಿ “ಗ್ರಾಮ ಒನ್” ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತ್’ಗಳಿದ್ದು, ಒಟ್ಟು 286 ಗ್ರಾಮ ಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈವರೆಗೂ ವಿವಿಧ ಇಲಾಖೆಗಳಿಂದ ಒಟ್ಟು 2,80,788 ಅರ್ಜಿಗಳನ್ನು ಸ್ವೀಕರಿಸಿ ನಾಗರಿಕರಿಗೆ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಸುನೀಲ್ ಕುಮಾರ್ ವಿವರಿಸಿದರು.


ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಮಹಾನಗರದ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಳಿಕ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.



Join Whatsapp