ಬೆಂಗಳೂರು: ನಗರದ ಕೆ.ಆರ್. ಮಾರುಕಟ್ಟೆ ಫ್ಲೈ ಓವರ್ ನಿಂದ ಹಣದ ಹೊಳೆ ಹರಿಸಿದ ಅರುಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹೋಂಡಾ ಆಕ್ಟಿವಾ ಸ್ಕೂಟಿಯಲ್ಲಿ ಬಂದಿದ್ದ ಈತ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ಹಣವನ್ನು ತೂರಿ ಹಣದ ಮಳೆ ಸುರಿಸಿದ್ದಾನೆ. ಮಾರುಕಟ್ಟೆ ಸಿಗ್ನಲ್ ಮೇಲಿರುವ ಫ್ಲೈಓವರ್ ಮೇಲೆ ನಿಂತು ತಾನು ತಂದಿದ್ದ 10 ರೂ ನೋಟುಗಳ ರಾಶಿಯನ್ನು ಫ್ಲೈಓವರ್ ನ ಎರಡೂ ಬದಿಯಲ್ಲಿ ಎರೆಚಿದ್ದಾನೆ. ಆಗಸದಿಂದ ನೋಟಿನ ರಾಶಿ ಕೆಳಗೆ ಬೀಳುತ್ತಿರುವುದನ್ನು ನೋಡಿದ ಜನ ಹಿಂದೆ ಮುಂದೆ ನೋಡದೇ ಅದನ್ನು ಆಯ್ದು ಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಸುಮಾರು ಅರ್ಧಗಂಟೆಗಳ ಕಾಲ ಫ್ಲೈಓವರ್ ಕೆಳಗೆ ಹಾಗೂ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಣವನ್ನು ಎರಚಿದ ಬಳಿಕ ಅರುಣ್ ಅಲ್ಲಿಂದ ತೆರಳಿದ್ದ. ಈ ವಿಡಿಯೋಗಳು ವ್ಯಾಪಕ ವೈರಲ್ ಆಗಿತ್ತು.
ಬೆಂಗಳೂರಿನ ನಾಗರಬಾವಿಯ ನಿವಾಸಿ ಅರುಣ್ ವೃತ್ತಿಯಲ್ಲಿ ಇವೆಂಟ್ ಪ್ಲಾನರ್ ಆಗಿದ್ದಾನೆ. ಈತನ ವಿರುದ್ಧ ಐಪಿಸಿ 283,290 ಹಾಗೂ ಕೆಪಿ ಆ್ಯಕ್ಟ್ 92(d) ಅಡಿಯಲ್ಲಿ ಎಫ್ ಐ ಆರ್ ಹಾಕಲಾಗಿದ್ದು, ವಶಕ್ಕೆ ಪಡೆಯಲಾಗಿದೆ.