ಹಿಜಾಬ್ ಅರ್ಜಿ ವಿಚಾರಣೆಗೆ ಮೂವರು ನ್ಯಾಯಾಧೀಶರ ಪೀಠ ಸ್ಥಾಪನೆ: ಸುಪ್ರೀಂಕೋರ್ಟ್

Prasthutha|

ನವದೆಹಲಿ: ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ಕೋರಿ ಕರ್ನಾಟಕದ ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಶೀಘ್ರವೇ ಮೂವರು ನ್ಯಾಯಾಧೀಶರ ಪೀಠ ಸ್ಥಾಪಿಸುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸೋಮವಾರ ತಿಳಿಸಿದ್ದಾರೆ.

- Advertisement -

ವಿದ್ಯಾರ್ಥಿಗಳು ಫೆಬ್ರವರಿ 6 ರಂದು ತಮ್ಮ ಪ್ರಾಯೋಗಿಕ ಪರೀಕ್ಷೆಗಳನ್ನು ಬರೆಯಬೇಕಾಗಿದೆ, ಆದ್ದರಿಂದ ಹಿಜಾಬ್ ಪ್ರಕರಣದ ಅರ್ಜಿಯನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ಮೌಖಿಕವಾಗಿ  ಮನವಿ ಮಾಡಿದರು. ಆ ವೇಳೆ ಪೀಠ ಈ ಹೇಳಿಕೆ ನೀಡಿದೆ.

ಸರ್ಕಾರಿ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಧರಿಸಲು ರಾಜ್ಯ ಸರ್ಕಾರ ಹೇರಿದ್ದ ನಿಷೇಧವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳನ್ನು ಹಿರಿಯ ವಕೀಲರು ಉಲ್ಲೇಖಿಸಿದರು.

- Advertisement -

 ಅಕ್ಟೋಬರ್ 2022 ರಲ್ಲಿ, ಇಬ್ಬರು ನ್ಯಾಯಾಧೀಶರ ಪೀಠವು ಮೇಲ್ಮನವಿಗಳಲ್ಲಿ ಭಿನ್ನ ತೀರ್ಪನ್ನು ನೀಡಿದೆ, ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹಿಜಾಬ್ ನಿಷೇಧವನ್ನು ಎತ್ತಿಹಿಡಿದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅದರ ವಿರುದ್ಧ ತೀರ್ಪು ನೀಡಿದ್ದರು.

ಆಗ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ” ಪ್ರಕರಣವನ್ನು ರಿಜಿಸ್ಟ್ರಾರ್‌ ಮುಂದೆ ಪ್ರಸ್ತಾಪಿಸಿ, ನಾವು ದಿನಾಂಕ ನಿಗದಿಪಡಿಸುತ್ತೇವೆ. ಇದು ತ್ರಿಸದಸ್ಯ ಪೀಠ ವಿಚಾರಣೆ ನಡೆಸಬೇಕಾದ ಪ್ರಕರಣವಾಗಿದೆ. ನ್ಯಾಯಾಲಯ ವಿಚಾರಣೆ ನಡೆಸಲಿದೆ” ಎಂದು ಪ್ರತಿಕ್ರಿಯಿಸಿದರು.

ಕಾಲೇಜು ಕ್ಯಾಂಪಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸುಪ್ರೀಂ ಕೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿನ್ನ ತೀರ್ಪು ನೀಡಿದ ಬಳಿಕ ವಿದ್ಯಾರ್ಥಿನಿಯರು ಸರ್ಕಾರಿ ಕಾಲೇಜುಗಳ ಬದಲಿಗೆ ಖಾಸಗಿ ಕಾಲೇಜುಗಳಿಗೆ ತೆರಳುತ್ತಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದರು.

ಆದರೆ ಪರೀಕ್ಷೆಗಳು ಸರ್ಕಾರಿ ಕಾಲೇಜುಗಳಲ್ಲಷ್ಟೇ ನಡೆಯುವುದರಿಂದ ಫೆಬ್ರವರಿಯಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ಹಿಜಾಬ್‌ ಧರಿಸಿ ಹಾಜರಾಗಲು ಅನುಮತಿ ನೀಡುವಂತೆ ಸೂಚಿಸಬೇಕು ಎಂದು ಕೋರಲಾಗಿತ್ತು.

ಹಿಜಾಬ್‌ಗೆ ನಿಷೇಧ ಹೇರಿದ್ದನ್ನು ಈ ಮೊದಲು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಸರ್ಕಾರ ನಿಷೇಧ ಹೇರಿದ್ದನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು ಇದರ ಬೆನ್ನಲ್ಲೇ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠ ಭಿನ್ನ ತೀರ್ಪು ನೀಡಿತು. ಆಗ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಹೇಮಂತ್‌ ಗುಪ್ತಾ ಅವರು ನಿಷೇಧವನ್ನು ಎತ್ತಿ ಹಿಡಿದರೆ ನ್ಯಾ. ಸುಧಾಂಶು ಧುಲಿಯಾ ನಿಷೇಧ ತೆರವು ಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.



Join Whatsapp