ಮಂಗಳೂರು: 35ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕಳ್ಳನ ಬಂಧನ

Prasthutha|

ಮಂಗಳೂರು: ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಸುಮಾರು 35ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.  

- Advertisement -

ಬಂಧಿತನನ್ನು ಬೆಳ್ತಂಗಡಿ ತಾಲೂಕು ಪಡಂಗಡಿ, ಮದ್ದಡ್ಕ, ಅಜ್ರಿಮಾರ್ ಹೌಸ್ ನಿವಾಸಿ ಹೈದ್ರೋಸ್ ಎಂಬವರ ಪುತ್ರ ಹಮೀದ್ ಕುಞಿಮೋನು (48) ಎಂದು ಗುರುತಿಸಲಾಗಿದೆ.

ಈತನ ವಿರುದ್ಧ ಮಂಗಳೂರು ಉತ್ತರ ಠಾಣೆಯಲ್ಲಿ ನಾಲ್ಕು, ಪುತ್ತೂರು ನಗರ ಠಾಣೆ-2, ಉಪ್ಪಿನಂಗಡಿ, ಚಿಕ್ಕಮಗಳೂರು ಜಿಲ್ಲೆಯ ಎನ್’ಆರ್ ಪುರ ತಲಾ ಒಂದು, ಚಿಕ್ಕಮಗಳೂರು ಗ್ರಾಮಾಂತರ, ವೇಣೂರು, ಬೆಳ್ತಂಗಡಿಯಲ್ಲಿ ತಲಾ 2, ಪುಂಜಾಲಕಟ್ಟೆ, ಶೃಂಗೇರಿ, ಬಂಟ್ವಾಳ, ಮೂಡಿಗೆರೆ, ಬೇಲೂರು, ಕಡಬ, ಧರ್ಮಸ್ಥಳ, ಹರಿಹರಪುರ, ಕೊಡಗು ಜಿಲ್ಲೆಯ ಭಾಗಮಂಡಲ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ಸೇರಿದಂತೆ ಒಟ್ಟು 35ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ 22 ವಾರಂಟ್’ಗಳಿವೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

- Advertisement -

ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿ

ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ನಲಪಾಡ್ ಅಪ್ಸರಾ ಛೇಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿ ಯು.ಎಂ. ಉಮರ್ ಫ್ಲವರ್ಸ್ ಸ್ಟಾಲ್’ನಲ್ಲಿ  2022, ನವೆಂಬರ್ 16ರಂದು ರಾತ್ರಿ 9 ಲಕ್ಷ ರೂ. ಕಳವಾಗಿತ್ತು. ಈ ಬಗ್ಗೆ ಕಂಕನಾಡಿ ಬಾಲಿಕಾಶ್ರಮ ರಸ್ತೆ, ಸಿಂಪೋನಿ ಅಪಾರ್ಟ್ ಮೆಂಟ್ ನಿವಾಸಿ ಉಮರಬ್ಬ ಎಂಬವರು ನವೆಂಬರ್ 17ರಂದು ಬಂದರು ಠಾಣೆಗೆ ದೂರು ನೀಡಿದ್ದರು.

ಉಮರಬ್ಬ ಅವರ ಮಗ ರಿಯಾಝ್ ನವೆಂಬರ್ 17ರಂದು ಬೆಳಗ್ಗೆ 6 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ, ಅಂಗಡಿಯ ಮುಖ್ಯದ್ವಾರದ ಶಟರ್’ನ ಸೆಂಟರ್ ಲಾಕ್ ಮತ್ತು ಒಳಗಿನ ಟೇಬಲ್ ಡ್ರಾವರ್’ನ ಲಾಕ್ ಮುರಿದು ಅದರಲ್ಲಿದ್ದ 9 ಲಕ್ಷ ರೂ.  ಹಾಗೂ ಅಂಗಡಿಯೊಳಗಡೆ ಅಳವಡಿಸಿದ್ದ ಸಿಸಿ ಕ್ಯಾಮರಾ ಡಿವಿಆರ್, ಮಾನಿಟರ್ ಇರಿಸಿದ ಬಾಕ್ಸ್ ಅನ್ನು ತೆರೆದು ಸುಮಾರು 10 ಸಾವಿರ ರೂ. ಮೌಲ್ಯದ ಸಿಸಿಕ್ಯಾಮರಾದ ಡಿವಿಆರ್ ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು.

ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಬಂದರು ಠಾಣೆಯ ಇನ್ಸ್’ಪೆಕ್ಟರ್ ರಾಘವೇಂದ್ರ ಎಂ.ಬೈಂದೂರು ಮತ್ತು ತಂಡ, ಹಳೆ ಆರೋಪಿಗಳ ಹಿನ್ನೆಲೆ ಜಾಲಾಡಿದಾಗ ಹಮೀದ್’ನ ಮೇಲೆ ಸಂಶಯಗೊಂಡು ಆತನನ್ನು ಜನವರಿ 14ರಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಮಂಗಳೂರು ನಗರದ ಜ್ಯೋತಿ ಸರ್ಕಲ್ ಬಳಿಯಲ್ಲಿ ಪತ್ತೆಹಚ್ಚಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಈತ ಕದ್ದಿದ್ದ 5.80 ಲಕ್ಷ ರೂ.ನಗದು, ಒಂದು ಡಿವಿಆರ್, ಒಂದು ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು.

ಹಣ ಕದ್ದು ನೆಲದಡಿ ಹೂತಿಟ್ಟ ಆರೋಪಿ

ಉಮರ್ ಫ್ಲವರ್ಸ್ ಸ್ಟಾಲ್’ನಲ್ಲಿ  ಕದ್ದ 9 ಲಕ್ಷ ರೂ. ಹಣವನ್ನು ಏನು ಮಾಡಬೇಕೆಂದು ತೋಚದೆ ಆರೋಪಿ ಹಮೀದ್ ಅದನ್ನು ಗೋಣಿಯೊಂದರಲ್ಲಿ ಹಾಕಿ ಅದನ್ನು ಮೂರು ಬ್ಯಾಗ್’ಗಳಲ್ಲಿ ಸುತ್ತಿ ನಗರದ ಹಳೆ ಕಟ್ಟಡದ ಸಮೀಪ ಗುಂಡಿ ತೆಗೆದು ಅದರಲ್ಲಿ ಇಟ್ಟಿದ್ದಾನೆ. ಅಗತ್ಯವಿದ್ದಾಗ ತೆಗೆದುಕೊಳ್ಳಬಹುದು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾನೆ. ಕೆಲವು ದಿನಗಳ ಬಳಿಕ ಬಂದು ನೋಡಿದಾಗ ಈ ಕಟ್ಟಡದ ಮಾಲೀಕರು ಕಟ್ಟಡವನ್ನು ನೆಲಸಮ ಮಾಡಿದ್ದಾರೆ. ಅಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಮಿಕರು ತೆರಳಿದ ಬಳಿಕ ಹಣ ತೆಗೆದುಕೊಳ್ಳಬಹುದು ಎಂದು ಭಾವಿಸಿ ಆರೋಪಿ ಕೆಲವು ಹೊತ್ತು ಅಲ್ಲೇ ಬೀಡುಬಿಟ್ಟಿದ್ದ. ಆದರೆ ಹಣ ಸಿಗದ ಹಿನ್ನೆಲೆಯಲ್ಲಿ ಅಲ್ಲಿಂದ ತೆರಳಿದ್ದಾನೆ.

ಈ ಮಧ್ಯೆ ಅಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಚಾಲಕ ಮಣ್ಣನ್ನು ಅಗೆಯುವಾಗ ಗೋಣಿ ಚೀಲ ಕಂಡಿದೆ. ಅದರಲ್ಲಿ ಹಣ ಇರುವುದನ್ನು ತಿಳಿದ ಆತ, ತಕ್ಷಣ ಉಳಿದ ಕೆಲಸಗಾರರನ್ನು ಬೇರೆಡೆಗೆ ಕಳುಹಿಸಿ ಹಣವನ್ನು ತೆಗೆದುಕೊಂಡಿದ್ದಾನೆ. ಅದಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾನೆ.

ಈ ಮಧ್ಯೆ ಪೊಲೀಸರು ಆರೋಪಿ ಹಮೀದ್’ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣ ಬಚ್ಚಿಟ್ಟ ಸತ್ಯವನ್ನು ಆತ ಪೊಲೀಸರಿಗೆ ತಿಳಿಸಿದ್ದಾನೆ. ಆತ ಹೇಳಿದ ಸ್ಥಳಕ್ಕೆ ಆತನನ್ನು ಕರೆದುಕೊಂಡು ಬಂದು ಪರಿಶೀಲಿಸಿದಾಗ ಅಲ್ಲಿ ಹಣ ಇರಲಿಲ್ಲ. ಮಾತ್ರವಲ್ಲ ಅಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಬಳಿಕ ಪೊಲೀಸರು ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನಿಗೆ ಹಣ ಸಿಕ್ಕಿರುವುದು ಬೆಳಕಿಗೆ ಬಂದಿದೆ.

“ನಾವು ತುಂಬಾ ಬಡವರು, ದೇವರೇ ನಮಗೆ ಹಣ ಕೊಟ್ಟಿರಬಹುದು ಎಂದು ಭಾವಿಸಿ ಹಣ ತೆಗೆದುಕೊಂಡು ಖರ್ಚು ಮಾಡಿದ್ದೇನೆ” ಎಂದು ಜೆಸಿಬಿ ಚಾಲಕ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾನೆ.

ಆತನಿಂದ 5.80 ಲಕ್ಷ ರೂ.ವಶಪಡಿಸಿಕೊಳ್ಳಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ. ಸಿಕ್ಕಿದ ಹಣವನ್ನು ಬಳಸುವುದು ಪ್ರಾಮಾಣಿಕತೆಯಲ್ಲ. ಖರ್ಚು ಮಾಡಿದ ಹಣವನ್ನು ಹೊಂದಿಸಿ ಠಾಣೆಗೆ ತಂದು ಒಪ್ಪಿಸುವಂತೆ ಸೂಚಿಸಿ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು.

ಪತಿಗೆ ಬೇಕಾದ ಬಟ್ಟೆ ಬರೆ ಕಟ್ಟಿಡುತ್ತಿದ್ದ ಪತ್ನಿ

ಆರೋಪಿ ಹಮೀದ್ ವೃತ್ತಿಪರ ಕಳ್ಳ ಎಂಬುದನ್ನು ಅರಿತಿದ್ದ ಆತನ ಪತ್ನಿ ಆತನ ಕೃತ್ಯದಿಂದ ರೋಸಿಹೋಗಿದ್ದಳು. ಪ್ರತಿ ನಾಲ್ಕೈದು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದ. ಅದಾದ ಕೆಲವೇ ದಿನಗಳಲ್ಲಿ ಪೊಲೀಸರು ಮನೆಗೆ ಬಂದು ಆತನನ್ನು ಬೇರೊಂದು ಪ್ರಕರಣದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ಪತ್ನಿ ರೋಸಿ ಹೋಗಿದ್ದಳು. ಆದ್ದರಿಂದ ಪೊಲೀಸರು ಮನೆಗೆ ಬರುವ ಮೊದಲೇ ಪತಿಗೆ ಜೈಲಿಗೆ ಬೇಕಾದ ಬಟ್ಟೆ ಬರೆ ಸಿದ್ಧಪಡಿಸಿ ಇಡುತ್ತಿದ್ದಳು. ಪೊಲೀಸರು ಮನೆಗೆ ಬಂದಾಗ ಆ ಬ್ಯಾಗನ್ನು ಅವರಿಗೆ ನೀಡುತ್ತಿದ್ದಳು ಎಂದು ಶಶಿಕುಮಾರ್ ತಿಳಿಸಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತರಾದ ದಿನೇಶ್ ಕುಮಾರ್, ಅಂಶುಕುಮಾರ್, ಎಸಿಪಿ ಪರಮೇಶ್ವರ ಹೆಗ್ಡೆ, ಬಂದರು ಠಾಣೆ ಇನ್ಸ್ ಪೆಕ್ಟರ್ ರಾಘವೇಂದ್ರ ಎಂ.ಬೈಂದೂರು, ಪಿಎಸ್’ಐಗಳಾದ ಮಂಜುಳಾ, ಫೈಝುನ್ನಿಸಾ, ಎಎಸ್’ಐ ದಾಮೋದರ್, ಸಿಬ್ಬಂದಿಗಳಾದ ಯಶವಂತ ರೈ, ತಿಪ್ಪರೆಡ್ಡಪ್ಪ, ಚಿದಾನಂದ, ಅಭಿಷೇಕ್, ಸಂಪತ್, ಸುನೀಲ್ ಕುಮಾರ್, ರಾಕೇಶ್ ಮುಂತಾದವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



Join Whatsapp