ಭಾರತದಲ್ಲಿ 2022ರಲ್ಲೂ ಅಲ್ಪಸಂಖ್ಯಾತರ ಹಕ್ಕುಗಳ ದಮನ- ಮಾನವ ಹಕ್ಕುಗಳ ಕಾವಲು ಸಮಿತಿ ಕಳವಳ

Prasthutha|

ನವದೆಹಲಿ: ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಬಗ್ಗೆ ತನ್ನ ತಾರತಮ್ಯ ನೀತಿ ಮುಂದುವರಿಸಿರುವ ಭಾರತದ ಬಿಜೆಪಿ ಸರಕಾರವು ಅವರನ್ನು ಕ್ರಮಬದ್ಧವಾಗಿ ಕಳಂಕಿತರಾಗಿಸುವ ಪ್ರಯತ್ನ ಮುಂದುವರಿಸಿದೆ ಎಂದು 2023ರ ಮಾನವ ಹಕ್ಕುಗಳ ಕಾವಲು ಸಮಿತಿಯ ಜಾಗತಿಕ ವರದಿಯಲ್ಲಿ ಹೇಳಲಾಗಿದೆ.

- Advertisement -


“ಬಿಜೆಪಿ ಬೆಂಬಲಿಗರಿಂದ ಅಲ್ಪಸಂಖ್ಯಾತರ ಗುಂಪು ಹಲ್ಲೆ ಪ್ರಕರಣಗಳು ಹೆಚ್ಚಾಗಿವೆ. ಭಾರತದ ನ್ಯಾಯಾಂಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೇರಿದಂತೆ ಎಲ್ಲಾ ವಲಯಗಳಲ್ಲೂ ಹಿಂದೂ ನೀತಿ ಹೇರಿಕೆಯು ಪ್ರತಿಫಲಿಸುವಂತೆ ಮಾಡಲಾಗಿದೆ” ಎಂದೂ ಎಚ್’ಆರ್ ಡಬ್ಲ್ಯು ವರದಿಯಲ್ಲಿ ತಿಳಿಸಿದೆ.


ಬಿಜೆಪಿ ಸರಕಾರವನ್ನು ಟೀಕಿಸುವ ನಾಗರಿಕ ಸಾಮಾಜಿಕ ಕಾರ್ಯಕರ್ತರು, ಸ್ವತಂತ್ರ ಪತ್ರಕರ್ತರು ಮೊದಲಾದವರನ್ನು ರಾಜಕೀಯ ಪ್ರೇರಿತ ಕ್ರಿಮಿನಲ್ ಖಟ್ಲೆಗಳಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸುವ, ಬಾಯಿ ಮುಚ್ಚಿಸುವ ಕೆಲಸವನ್ನು ಆಳುವ ಪಕ್ಷದ ಪರವಾಗಿರುವವರು ಮಾಡುತ್ತಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ವರದಿ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ಶಾಂತಿಯುತವಾಗಿ ಸಭೆ ಸೇರಲು ಕೂಡ ಆಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
“ಮೂರು ವರ್ಷಗಳ ಹಿಂದೆ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತುಕೊಂಡ ಒಕ್ಕೂಟ ಸರಕಾರವು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಒಡೆದ ಬಳಿಕ ಅಲ್ಲಿ ಮುಕ್ತ ಮಾತುಗಳಿಗೆ, ಶಾಂತಿಯುತ ಸಭೆ ಸೇರುವಿಕೆ ಹಾಗೂ ಇತರ ಸಂವಿಧಾನಬದ್ಧ ಹಕ್ಕುಗಳು ಲಭ್ಯವಾಗದಂತೆ ಮಾಡಲಾಗಿದೆ. ಕೇಂದ್ರ ನೇಮಿತ ಸರಕಾರವು ಜಮ್ಮು ಮತ್ತು ಕಾಶ್ಮೀರ ಸುರಕ್ಷತಾ ಕಾಯ್ದೆಯನ್ನು ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ನು ಬಳಸಿ ಸಾಮಾಜಿಕ ಕಾರ್ಯಕರ್ತನ್ನು, ಪತ್ರಕರ್ತರನ್ನು, ಬಿಜೆಪಿಯನ್ನು ಟೀಕಿಸುವವರನ್ನು ಜೈಲಿಗೆ ಹಾಕುತ್ತಿದೆ. ಪುಲಿಟ್ಶರ್ ಪ್ರಶಸ್ತಿ ವಿಜೇತ ಪತ್ರಕರ್ತರೊಬ್ಬರನ್ನು ಅವರು ಮುಸ್ಲಿಂ ಎಂಬ ಕಾರಣಕ್ಕೆ ಪ್ರಶಸ್ತಿ ಪಡೆಯಲು ಹೋಗದಂತೆ ತಡೆಯಲಾಯಿತು. ಅನುಮಾನಾಸ್ಪದ ಗುಂಪುಗಳು ಜಮ್ಮು ಮತ್ತು ಕಾಶ್ಮೀರದ ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿವೆ” ಎಂದು ವರದಿಯಲ್ಲಿ ವಿವರಿಸಲಾಗಿದೆ.

- Advertisement -


“ಬಿಜೆಪಿ ಸರಕಾರವು ಬಹುಮತೀಯ ಹಿಂದೂ ನೀತಿಗೆ ಒತ್ತು ಕೊಟ್ಟಿರುವುದರಿಂದ ಆ ಪಕ್ಷದ ಬೆಂಬಲಿಗರು ಮತ್ತು ಬಾಧ್ಯಸ್ಥರು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಮತ್ತು ಹಿಂಸಾತ್ಮಕ ದಾಳಿಯನ್ನು ನಡೆಸುತ್ತಿದ್ದಾರೆ” ಎಂದು ಎಚ್ ಆರ್ ಡಬ್ಲ್ಯು ಇದರ ದಕ್ಷಿಣ ಏಷ್ಯಾ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಹೇಳಿದ್ದಾರೆ.
“ನಾಗರಿಕರ ಹಕ್ಕುಗಳ ದಮನ ಮಾಡುವವರನ್ನು ಬಂಧಿಸುವ ಬದಲು ಅಧಿಕಾರದಲ್ಲಿರುವವರು, ಅವರು ಆಳುವ ಪಕ್ಷದ ಬೆಂಬಲಿಗರು ಎನ್ನುವ ಕಾರಣಕ್ಕಾಗಿ ಅವರನ್ನು ಪೋಷಿಸುತ್ತಿವೆ” ಎಂದೂ ಅವರು ಹೇಳಿದರು.


“ಬಲವಂತದ ಮತಾಂತರ ಕಾನೂನನ್ನು ದುರುಪಯೋಗ ಮಾಡುತ್ತಿರುವ ಆಳುವವರ ಬೆಂಬಲಿಗರು ಮುಖ್ಯವಾಗಿ ದಲಿತ, ಆದಿವಾಸಿ ಜನರನ್ನು ಕ್ರಿಶ್ಚಿಯನರು ಬಲವಂತವಾಗಿ ಮತಾಂತರ ಮಾಡುತ್ತಾರೆ ಎಂದು ಗೂಬೆ ಕೂರಿಸುತ್ತಾರೆ. 2002ರ ಗುಜರಾತ್ ಗಲಭೆಯಲ್ಲಿ 14 ಜನರ ಕೊಲೆ, ಮುಸ್ಲಿಂ ಗರ್ಭಿಣಿಯ ಅತ್ಯಾಚಾರದಂತಹ ಘೋರ ಪಾತಕ ಮಾಡಿದ್ದ 11 ಹಿಂದುತ್ವವಾದಿಗಳನ್ನು ಬಿಜೆಪಿಯು ಬಿಡುಗಡೆ ಮಾಡಲು ಅನುಮತಿಸಿತು. ಅವರ ಬಿಡುಗಡೆಯನ್ನು ಭಾರೀ ಖಂಡನೆಯ ನಡುವೆಯೇ ಬಿಜೆಪಿಯವರು ಹಬ್ಬದಂತೆ ಆಚರಿಸಿದರು. ಇದು ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ಸರಕಾರದ ತಾರತಮ್ಯ ಮನೋಭಾವವನ್ನು ಸ್ಪಷ್ಟಪಡಿಸಿತು.” ಎಂದೂ ವರದಿಯು ಸ್ಪಷ್ಟಪಡಿಸಿದೆ.


ಹುಡುಗಿಯರು ಮತ್ತು ಮಹಿಳೆಯರ ಬಗ್ಗೆ ಹಿಂಸಾಚಾರ ಒಂದೇ ಸಮನೆ ಅಧಿಕರಿಸಿರುವುದಾಗಿ ವರದಿ ಬರೆದಿದೆ. 2021ರಲ್ಲಿ 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ದಿನಕ್ಕೆ ಸರಾಸರಿ 86ರಂತೆ ಅತ್ಯಾಚಾರಗಳು ನಡೆದಿವೆ.
“ಬಿಜೆಪಿ ಆಡಳಿತದ ಕರ್ನಾಟಕದಲ್ಲಿ ಮುಸ್ಲಿಂ ಹುಡುಗಿಯರು ಶಾಲಾ ಕಾಲೇಜುಗಳಿಗೆ ಹಿಜಾಬ್ ತೊಟ್ಟು ಬರುವಂತಿಲ್ಲ ಎಂಬ ಕಾಯ್ದೆಯ ವಿರುದ್ಧ ಒಮ್ಮತದ ತೀರ್ಪು ನೀಡಲು ಸರ್ವೋಚ್ಚ ನ್ಯಾಯಾಲಯವು ಕಳೆದ ಸೆಪ್ಟೆಂಬರ್’ನಲ್ಲಿ ವಿಫಲವಾಯಿತು. ಇಬ್ಬರು ನ್ಯಾಯಾಧೀಶರು ವಿಭಿನ್ನ ತೀರ್ಪು ನೀಡಿದರು. ಕರ್ನಾಟಕ ಸರಕಾರವು ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರಬಾರದು ಎಂದು ಕಳೆದ ಫೆಬ್ರವರಿಯಲ್ಲಿ ಸುತ್ತೋಲೆ ಹೊರಡಿಸಿತು. ಒಂದು ತಿಂಗಳ ಬಳಿಕ ರಾಜ್ಯ ಉಚ್ಚ ನ್ಯಾಯಾಲಯವು ಸರಕಾರದ ತೀರ್ಮಾನವನ್ನು ಎತ್ತಿ ಹಿಡಿಯಿತು” ಎಂಬುದು ವರದಿಯಲ್ಲಿದೆ.
ಮ್ಯಾನ್ಮಾರ್ ಮೂಲದ ರೋಹಿಂಗ್ಯಾ ಮುಸ್ಲಿಮರು ಭಾರತದಲ್ಲಿ ಇವರಿಂದ ನಿತ್ಯ ತೊಂದರೆಗೀಡಾಗುತ್ತಿದ್ದಾರೆ, ಬಂಧನಕ್ಕೀಡಾಗುತ್ತಿದ್ದಾರೆ, ಗಡಿಪಾರು ಎದುರಿಸುತ್ತಿದ್ದಾರೆ. ನಿರಾಶ್ರಿತರು ವಾಪಸು ಹೋಗಬೇಕಾದ ಸ್ಥಿತಿಯನ್ನು ಇವರು ತರುತ್ತಿದ್ದಾರೆ.


“ಗಡಿಪಾರು ಮಾಡಬಾರದು ಎಂದು ಮಣಿಪುರ ರಾಜ್ಯದ ಮಾನವ ಹಕ್ಕುಗಳ ಆಯೋಗವು ತೀರ್ಪು ನೀಡಿದ ಬಳಿಕವೂ ಭಾರತ ಸರಕಾರವು ಮಾರ್ಚ್ ನಲ್ಲಿ ರೋಹಿಂಗ್ಯಾ ಮಹಿಳೆಯೊಬ್ಬರನ್ನು ಮ್ಯಾನ್ಮಾರ್’ಗೆ ಗಡಿಪಾರು ಮಾಡಿತು ಎಂದು ವರದಿ ವಿವರಿಸಿದೆ.
“ಮ್ಯಾನ್ಮಾರ್’ನಲ್ಲಿ ಮಿಲಿಟರಿ ಮತ್ತು ನಾಗರಿಕರ ನಡುವಣ ಸಶಸ್ತ್ರ ಹೋರಾಟದ ಕಾರಣಕ್ಕೆ ದೇಶ ಬಿಟ್ಟು ಬಂದ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರನ್ನು ಭಾರತವು ಅಂತಾರಾಷ್ಟ್ರೀಯ ನಿಯಮದಂತೆ ನಡೆಸಿಕೊಳ್ಳುತ್ತಿಲ್ಲ” ಎಂಬುದು ವರದಿಯಿಂದ ಸ್ಪಷ್ಟಗೊಂಡಿದೆ.


ನವೆಂಬರ್’ನಲ್ಲಿ ನಡೆದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನ ಸಭೆಯಲ್ಲಿ ಭಾರತದ ಈ ಬಗೆಗಿನ ನಡೆಯು ವಿಮರ್ಶೆಗೊಂಡು, ಅಲ್ಪಸಂಖ್ಯಾತರ ಹಕ್ಕು ಕಾಪಾಡಲು, ದಮನಿತರ ರಕ್ಷಣೆಗೆ ನಿಲ್ಲಲು, ಲಿಂಗ ತಾರತಮ್ಯ ಮಾಡದಂತೆ ನೋಡಿಕೊಳ್ಳಲು, ನಾಗರಿಕರ ಸ್ವಾತಂತ್ರ್ಯ ಎತ್ತಿ ಹಿಡಿಯಲು, ಮಾನವ ಹಕ್ಕು ಹೋರಾಟಗಾರರನ್ನು ಕಾಪಾಡಲು, ಕಸ್ಟಡಿಯಲ್ಲಿ ಹಿಂಸಾಚಾರ ನಿಲ್ಲಿಸಲು ಭಾರತ ಸರಕಾರಕ್ಕೆ ತಾಕೀತು ಮಾಡಲಾಗಿತ್ತು.
2022ರ ಮಾನವ ಹಕ್ಕುಗಳ ಕಣ್ಗಾವಲು ವರದಿಯು ಬಿಜೆಪಿ ಸರಕಾರದ ಕಣ್ಣು ತೆರೆಸುವ ಬದಲು ಕಣ್ಣು ಕೆಂಪು ಮಾಡಿದ್ದಾಗಿ ವರದಿಯಾಗಿದೆ.



Join Whatsapp