►ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಅಳವಡಿಕೆ ತುರ್ತು ಅಗತ್ಯವೆಂದು ಅಭಿಪ್ರಾಯ
ಬೆಂಗಳೂರು: ಮೌಲ್ಯ ಶಿಕ್ಷಣವನ್ನು ಈ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
‘ಶಾಲಾ ಹಂತದಲ್ಲಿ ಮೌಲ್ಯ ಶಿಕ್ಷಣದ ಅನುಷ್ಠಾನ’ ಕುರಿತು ಶಿಕ್ಷಣ ತಜ್ಞರು, ವಿವಿಧ ಧಾರ್ಮಿಕ ಗುರುಗಳು, ಚಿಂತಕರು, ಉನ್ನತ ಅಧಿಕಾರಿಗಳೊಂದಿಗೆ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ (ಜ.9) ನಡೆದ ದುಂಡು ಮೇಜಿನ ಸಮಾಲೋಚನಾ ಸಭೆಯ ಬಳಿಕ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು.
‘ಮೌಲ್ಯ ಶಿಕ್ಷಣ ಅಳವಡಿಸುವುದು ತುರ್ತು ಅಗತ್ಯ ಎಂದು ಸಭೆಯಲ್ಲಿ ಭಾಗವಹಿಸಿದ ಎಲ್ಲ ಗಣ್ಯರು ಅಭಿಪ್ರಾಯ ನೀಡಿದ್ದಾರೆ. ಲಿಖಿತ ರೂಪದಲ್ಲಿ ಇನ್ನಷ್ಟು ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪಡೆಯಲಾಗುತ್ತದೆ.
ಅತ್ಯಂತ ಅರ್ಥಪೂರ್ಣವಾಗಿ ಸಭೆ ನಡೆದಿದೆ. ಆನ್¬ಲೈನ್ ಮತ್ತು ಆಫ್¬ಲೈನ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಭೆಯಲ್ಲಿ ವ್ಯಕ್ತವಾಗುವ ಅಂಶಗಳ ಆಧಾರದ ಮೇಲೆ ಇಲಾಖಾ ಹಂತದಲ್ಲಿ ಆಯೋಜಿಸುವ ಸಭೆಗಳಲ್ಲಿ ಚರ್ಚಿಸಿ ‘ಮೌಲ್ಯ ಶಿಕ್ಷಣ’ ದ ಅನುಷ್ಠಾನದ ವಿಧಾನಗಳನ್ನು ಅಂತಿಮಗೊಳಿಸಲಾಗುತ್ತದೆ’ ಎಂದು ಸಚಿವರು ಹೇಳಿದರು.
‘ಕರ್ನಾಟಕ ಸೇರಿದಂತೆ ದೇಶದ ಅನೇಕ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಈಗಾಗಲೇ ಮೌಲ್ಯ ಶಿಕ್ಷಣವನ್ನು ಅಳವಡಿಸಿಕೊಂಡಿವೆ. ಇದನ್ನು ವ್ಯಾಪಕವಾಗಿ ಎಲ್ಲ ಶಾಲೆಗಳಲ್ಲೂ ಅಳವಡಿಸಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಮೂಡಿ ಬಂದಿವೆ’ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು
*ದೇವರು, ಗುರುಗಳು, ಹಿರಿಯರು ಎನ್ನುವ ಗೌರವ ಭಾವನೆ, ಭಕ್ತಿಯನ್ನು ನೈತಿಕ ಶಿಕ್ಷಣವು ಒಳಗೊಂಡಿರಬೇಕು.
*ನೈತಿಕತೆ, ಮೌಲ್ಯಗಳು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗದೇ ದೈನಂದಿನ ಜೀವನದಲ್ಲಿ ಅಳವಡಿಕೆಯಾಗಬೇಕು. ಆಚರಣೆಗೆ ಬರಬೇಕು. ನೈತಿಕ ಶಿಕ್ಷಣದ ಪಾಠಗಳು ಪ್ರಾಯೋಗಿಕವಾಗಿರಬೇಕು.
*ರಾಜಕಾರಣಿಗಳು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೌಲ್ಯ ಶಿಕ್ಷಣಕ್ಕೆ ಮೇಲ್ಪಂಕ್ತಿ ಹಾಕಬೇಕು. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಬೇಕು.
*ಶಿಕ್ಷಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು.
*ಮಕ್ಕಳಿಗೆ ಸಾತ್ವಿಕ ಆಹಾರವನ್ನು ನೀಡಬೇಕು. ಇದರಿಂದ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.
*ಮಕ್ಕಳ ಮೊಬೈಲ್ ಫೋನ್ ಗೀಳು ಬಿಡಿಸಬೇಕು. ಅದಕ್ಕಾಗಿ ಪಾಲಕರು ಕೂಡ ಸಾಧ್ಯವಾದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿ ಮಾದರಿಯಾಗಬೇಕು.
*ಮನೆಯಲ್ಲಿ ಪಾಲಕರು ಮಕ್ಕಳಿಗೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಸೂಕ್ತ ವಾತಾವರಣ ನಿರ್ಮಾಣ ಮಾಡಬೇಕು.
*ನೈತಿಕತೆ, ಮೌಲ್ಯಗಳನ್ನು ಶಿಕ್ಷಣದ ಪ್ರತಿ ಹಂತದಲ್ಲೂ, ಹಂತ ಹಂತವಾಗಿ ನೀಡಬೇಕು. ಈ ಬಗ್ಗೆ ಮೌಲ್ಯಾಂಕನ ನಿಗದಿಯಾಗಬೇಕು. ಪರೀಕ್ಷೆಯನ್ನೂ ಮಾಡಬೇಕು.
*ನೈತಿಕ, ಮೌಲ್ಯ ಶಿಕ್ಷಣದಿಂದ ಮಕ್ಕಳು ವ್ಯಕ್ತಿತ್ವ ರೂಪಿಸಲು ಸಾಧ್ಯವಾಗುತ್ತದೆ.
*ಮೌಲ್ಯ ಶಿಕ್ಷಣವೂ ಸಹಬಾಳ್ವೆ, ಅಹಿಂಸೆ, ಸತ್ಯ ಮಾರ್ಗ, ಭಾರತೀಯತೆಯನ್ನು ಒಳಗೊಂಡಿರಬೇಕು.
ಶಿಕ್ಷಣ ತಜ್ಞರು, ಚಿಂತಕರು, ಧಾರ್ಮಿಕ ಗುರುಗಳು ಸೇರಿದಂತೆ 50ಕ್ಕೂ ಹೆಚ್ಚು ಗಣ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ.