“ಸಿದ್ದು ನಿಜಕನಸು ಪುಸ್ತಕ” ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ: ಬಿಜೆಪಿಗೆ ಮುಖಭಂಗ

Prasthutha|

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿಯವರು ಹೊರತರಲು ಮುಂದಾಗಿರುವ “ಸಿದ್ದು ನಿಜಕನಸು ಪುಸ್ತಕ”ದ ಬಿಡುಗಡೆಗೆ ನ್ಯಾಯಾಲಯದ ತಡೆಯಾಜ್ಞೆ ನೀಡಿದೆ.

- Advertisement -

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೇಂದ್ರೀಕರಿಸಿರುವ ʼಸಿದ್ದು ನಿಜಕನಸುಗಳುʼ ಪುಸ್ತಕ ಬಿಡುಗಡೆಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ.

ಸಿದ್ದರಾಮಯ್ಯ ಪುತ್ರ, ವರುಣ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಲ್ಲಿಸಿದ್ದ ಅಸಲು ದಾವೆಯ ವಿಚಾರಣೆ ನಡೆಸಿದ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್‌ ಅವರು ಪ್ರತಿವಾದಿಗಳನ್ನು ನಿರ್ಬಂಧಿಸಿ ಆದೇಶ ಮಾಡಿದ್ದಾರೆ.

- Advertisement -

“ಪ್ರಕರಣಕ್ಕೆ ಸಂಬಂಧಿಸಿದಂತೆ ಫಿರ್ಯಾದಿಯ ಬಗ್ಗೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ 1-7ನೇ ಪ್ರತಿವಾದಿಗಳು (ಸಚಿವ ಡಾ. ಸಿ ಎನ್‌ ಅಶ್ವತ್ಥನಾರಾಯಣ, ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬರಹಗಾರ ರೋಹಿತ್‌ ಚಕ್ರತೀರ್ಥ, ಸಂತೋಷ್‌ ತಿಮ್ಮಯ್ಯ, ವೃಷಾಂಕ್‌ ಭಟ್‌ ಮತ್ತು ರಾಕೇಶ್‌ ಶೆಟ್ಟಿ) ಮತ್ತು ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ‘ಸಿದ್ದು ನಿಜಕನಸುಗಳು’ ಪುಸ್ತಕದ ಕುರಿತು ಯಾವುದೇ ತೆರನಾದ ಮಾನಹಾನಿ ಹೇಳಿಕೆ, ಬಿಡುಗಡೆ, ಮಾರಾಟ, ಪ್ರಚಾರವನ್ನು ಮುಂದಿನ ವಿಚಾರಣೆವರೆಗೆ ಮಾಡುವಂತಿಲ್ಲ. ಫಿರ್ಯಾದಿ ನೀಡಿದ ಲಿಂಕ್‌ ಆಧರಿಸಿ, ಮಧ್ಯಸ್ಥಿಕೆದಾರರಾಗಿರುವ 8 (ಫ್ಲಿಪ್‌ ಕಾರ್ಟ್‌) ಮತ್ತು 9ನೇ ಪ್ರತಿವಾದಿಗಳು (ಅಮೆಜಾನ್‌ ಇಂಡಿಯಾ) ಮಾನಹಾನಿ ವಿಚಾರಗಳನ್ನು ತೆಗೆದು ಹಾಕಬೇಕು. ಪುಸ್ತಕದ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದ್ದು, ಪ್ರತಿವಾದಿಗಳಿಗೆ ದಾವೆ ಸಮನ್ಸ್‌ ಮತ್ತು ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಫೆಬ್ರವರಿ 9ಕ್ಕೆ ಮುಂದೂಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರು “ಪ್ರತಿವಾದಿಗಳು ಈಗಾಗಲೇ ಸಿದ್ದು ನಿಜಕನಸುಗಳು ಎಂಬ ಪುಸ್ತಕವನ್ನು ಫಿರ್ಯಾದಿ ಅಥವಾ ಅವರ ತಂದೆಯ ಲಿಖಿತ ಒಪ್ಪಿಗೆ ಪಡೆಯದೇ ಈಗಾಗಲೇ ಮುದ್ರಿಸಿದ್ದಾರೆ. ಸದರಿ ಪುಸ್ತಕದಲ್ಲಿ ಯತೀಂದ್ರ ಮತ್ತು ಅವರ ತಂದೆ ಸಿದ್ದರಾಮಯ್ಯ ವಿರುದ್ಧ ಮಾನಹಾನಿ ವಿಚಾರಗಳನ್ನು ಮುದ್ರಿಸಲಾಗಿದೆ. ಪುಸ್ತಕ ಬಿಡುಗಡೆ ಮಾಡಿದರೆ ಫಿರ್ಯಾದಿ ಮತ್ತು ಅವರ ತಂದೆಯ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಇದು ಅವರ ಬೆಂಬಲಿಗರ ಭಾವನೆಗಳಿಗೆ ಘಾಸಿ ಉಂಟು ಮಾಡಲಿದೆ. ಹೀಗಾಗಿ, ಮಧ್ಯಂತರ ಪ್ರತಿಬಂಧಕಾದೇಶ ಮಾಡಬೇಕು” ಎಂದು ಕೋರಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.

ಬೆಂಗಳೂರಿನ ಪುರಭವನದಲ್ಲಿ ಮಧ್ಯಾಹ್ನ 3ಗಂಟೆಗೆ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ, ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಸಚಿವ ಸಿ ಎನ್‌ ಅಶ್ವತ್ಥನಾರಾಯಣ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿಯ ಎಸ್‌ ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿತ್ತು.

ಪುಸ್ತಕ ಬಿಡುಗಡೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಪುರಭವನದ ಮುಂಭಾಗ ಭಾರೀ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಸೋಮವಾರ ನಗರದ ಟೌನ್ ಹಾಲ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಕಾರ್ಯಕ್ರಮ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ.

ನ್ಯಾಯಾಲಯ ತಡೆಯಾಜ್ಞೆ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಪುರಭವನದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಪೆಚ್ಚು ಮೊರೆ ಹಾಕಿ ಮನೆಗೆ ಹೋಗುತ್ತಿದ್ದ ದೃಶ್ಯ ಕಂಡುಬಂತು.

(ಪೂರಕ ಮಾಹಿತಿ: ಬಾರ್ & ಬೆಂಚ್)



Join Whatsapp