ಹಿಜಾಬ್ ಕಾರಣಕ್ಕೆ ಸರಕಾರಿ ಕಾಲೇಜುಗಳನ್ನು ಬಿಟ್ಟ ಶೇಕಡಾ 50ರಷ್ಟು ಮುಸ್ಲಿಂ ವಿದ್ಯಾರ್ಥಿಗಳು!

Prasthutha|

ನವದೆಹಲಿ: ಸರಕಾರವು ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿದ ಕಾರಣಕ್ಕೆ ಶೇಕಡಾ 50ರಷ್ಟು ವಿದ್ಯಾರ್ಥಿಗಳು ಕಾಲೇಜು ಬಿಟ್ಟಿದ್ದಾರೆ, ಇಲ್ಲವೇ ಖಾಸಗಿ ಕಾಲೇಜುಗಳಿಗೆ ಪ್ರವೇಶಾತಿ ಬದಲಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

2021-22ರ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಮೊದಲ ವರ್ಷಕ್ಕೆ 1,296 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದರು. 2022-23ರಲ್ಲಿ ಇದು 1,320ಕ್ಕೆ ಏರಿಕೆಯಾಗಿದೆ.

ಸರಕಾರಿ ಕಾಲೇಜುಗಳಲ್ಲಿ ಪಿಯುಸಿ ಮೊದಲ ವರ್ಷಕ್ಕೆ 2021- 22ರಲ್ಲಿ 388 ಮುಸ್ಲಿಂ ವಿದ್ಯಾರ್ಥಿಗಳು ಸೇರಿದ್ದರೆ ಆ ಸಂಖ್ಯೆಯು 2022-23ರಲ್ಲಿ 186ಕ್ಕೆ ಇಳಿದಿದೆ.

- Advertisement -

ಸಮೀಕ್ಷೆಯಂತೆ ಸರಕಾರಿ ಕಾಲೇಜುಗಳಿಗೆ 2020-21ರಲ್ಲಿ 178 ಮುಸ್ಲಿಂ ಹುಡುಗಿಯರು ಸೇರಿದ್ದರೆ ಈ ವರ್ಷ ಬರೇ 91 ಮುಸ್ಲಿಂ ಹುಡುಗಿಯರು ಸೇರ್ಪಡೆಯಾಗಿದ್ದಾರೆ.

ಅದೇ ರೀತಿ ಸರಕಾರಿ ಕಾಲೇಜುಗಳಿಗೆ ಸೇರಿದ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯು ಸಹ 210ರಿಂದ 100ಕ್ಕೆ ಕುಸಿದಿದೆ.

ಇದೇ ವೇಳೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಕಾಲೇಜುಗಳನ್ನು ಸೇರಿದ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.  2021-22ರಲ್ಲಿ 662 ಇದ್ದ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯು 2022-23ರಲ್ಲಿ ಪಿಯು ಸೇರಿದ ಮುಸ್ಲಿಮರ ಸಂಖ್ಯೆ 927ಕ್ಕೆ ಏರಿದೆ. ಮುಸ್ಲಿಂ ಹುಡುಗರು 334ರಿಂದ 440ಕ್ಕೆ ಹಾಗೂ ಹುಡುಗಿಯರು 328ರಿಂದ 487ಕ್ಕೆ ಏರಿಕೆಯಾಗಿದೆ.

ಉಡುಪಿಯ ಸಾಲಿಯಾತ್ ಪಿಯು ಕಾಲೇಜು ಇದಕ್ಕೆ ಒಂದು ಉದಾಹರಣೆ. ಇಲ್ಲಿ 2021-22ರಲ್ಲಿ 30 ಮುಸ್ಲಿಂ ಹುಡುಗಿಯರು ಪಿಯು ಓದುತ್ತಿದ್ದುದು ಈಗ 57ಕ್ಕೆ ಏರಿಕೆಯಾಗಿದ್ದಾರೆ.

“ನಮ್ಮ ಕಾಲೇಜಿಗೆ ಸೇರಿದ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆಯು ಬಹುತೇಕ ದುಪ್ಪಟ್ಟು ಆಗಿದೆ. ಅವರನ್ನು ಹಿಜಾಬ್ ಸಮಸ್ಯೆಯು ಹೇಗೆ ವ್ಯಕ್ತಿಗತವಾಗಿ ಹಾಗೂ ಶೈಕ್ಷಣಿಕವಾಗಿ ಬಾಧಿಸಿದೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಸಾಲಿಯತ್ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಹೇಳುತ್ತಾರೆ.

“ಯಾವುದೇ ಹಿಜಾಬ್ ಗಲಾಟೆಯಲ್ಲಿ ಸಿಕ್ಕಿಕೊಳ್ಳಬಾರದು ಎಂಬುದಕ್ಕಾಗಿ ಹುಡುಗರನ್ನೂ ಈಗಿರುವ ಕಾಲೇಜಿನಿಂದ ಬಿಡಿಸಿ ಬೇರೆ ಕಾಲೇಜು ಸೇರಿಸಲಾಗುತ್ತಿದೆ. ಉಡುಪಿ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಗಲಾಟೆಯಾದುದರಿಂದ ಹೆತ್ತವರು ಗಂಡು ಮಕ್ಕಳನ್ನೂ ಬೇರೆ ಕಡೆ ಸೇರಿಸುತ್ತಿದ್ದಾರೆ” ಎಂದು ಅಲ್ ಇಹ್ಸಾನ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಹಬೀಬ್ ರೆಹಮಾನ್ ಹೇಳುತ್ತಾರೆ.

“ಕಾಲೇಜು ಸೇರುವಿಕೆ ಎನ್ನುವಾಗ ನಾವು ಒಟ್ಟಾರೆ ವಿದ್ಯಾರ್ಥಿಗಳ ಸೇರ್ಪಡೆಯನ್ನು ನೋಡುತ್ತೇವೆ. ಅವರ ಜಾತಿ, ಧರ್ಮ, ಕುಲವೆಲ್ಲ ನೋಡುವುದಿಲ್ಲ. ಯಾವುದೇ ಸಮುದಾಯದಿಂದ ಯಾರೊಬ್ಬರೂ ಹೊರಗೆ ಹೋಗಿಲ್ಲ. ಅಲ್ಲದೆ ಯಾರು ಹೊರ ಹೋದರು ಎನ್ನುವುದಕ್ಕಿಂತ ಗುಣಮಟ್ಟದ ಶಿಕ್ಷಣ ನೀಡುವುದರತ್ತ ನಾವು ಗಮನ ಕೊಡುತ್ತೇವೆ. ಎಲ್ಲ ಸರಕಾರಿ ಪಿಯು ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಸೇರ್ಪಡೆಯು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಉಡುಪಿ ಸರಕಾರಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದ್ದರೆ ಅದನ್ನು ಗಮನಿಸಲಾಗುವುದು” ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಪ್ರತಿಕ್ರಿಯಿಸಿದ್ದಾರೆ.

ಜಿಎಆರ್- ಒಟ್ಟು ಹಾಜರಿ ಪ್ರಮಾಣದ ಅಧಿಕೃತ ಸಮೀಕ್ಷೆಯಂತೆ 2017-18ಕ್ಕೆ 2007-08ರಿಂದ ಉನ್ನತ ಶಿಕ್ಷಣಕ್ಕೆ ಬರುವ ಮುಸ್ಲಿಂ ಹೆಣ್ಣು ಮಕ್ಕಳ ಪ್ರಮಾಣವು 1.1%ದಿಂದ 15.8%ಕ್ಕೆ ಏರಿಕೆಯಾಗಿದೆ. 18-23ರ ಪ್ರಾಯದ ಮುಸ್ಲಿಂ ಹೆಣ್ಣುಮಕ್ಕಳು ಹೆಚ್ಚು ವಿದ್ಯಾಮುಖಿಯರಾಗುತ್ತಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪಿಯು ಮಂಡಳಿಯ ಜಿಲ್ಲಾ ಉಪ ನಿರ್ದೇಶಕರ ಪ್ರಕಾರ ಕಾಲೇಜಿನಲ್ಲಿ ಸೇರಿದ ಎಲ್ಲ ಮುಸ್ಲಿಂ ಹೆಣ್ಣು ಮಕ್ಕಳೂ 2022ರಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಉಡುಪಿ ಸರಕಾರಿ ಪಿಯು ಕಾಲೇಜಿಗೆ 2021-22ರಲ್ಲಿ ಅತಿ ಹೆಚ್ಚು ಎಂದರೆ 41 ಮುಸ್ಲಿಂ ಹೆಣ್ಣು ಮಕ್ಕಳು 2018-19ರ ಬಳಿಕ ಸೇರಿದ್ದಾರೆ. ಆದರೆ 2022-23 ರಲ್ಲಿ ಹೊಸ ಸೇರ್ಪಡೆ 27 ಮಾತ್ರ.

ಕರ್ನಾಟಕ ಹಿಜಾಬ್ ಗಲಾಟೆ

2022ರ ಫೆಬ್ರವರಿಯಲ್ಲಿ ಮುಸ್ಲಿಂ ಹುಡುಗಿಯರು ತೊಡುವ ಹಿಜಾಬ್ ಶಾಲಾ ಸಮವಸ್ತ್ರಕ್ಕೆ ವಿರುದ್ಧವಾದುದು ಎಂಬ ಗಲಾಟೆ ಕರ್ನಾಟಕದಲ್ಲಿ ಪ್ರಾರಂಭಗೊಂಡಿತು.

ಫೆಬ್ರವರಿ 5ರಂದು ಕರ್ನಾಟಕ ಸರಕಾರವು ಎಲ್ಲೆಲ್ಲಿ ಸಮವಸ್ತ್ರದ ನೀತಿ ಇದೆಯೋ ಅಲ್ಲೆಲ್ಲ ವಿದ್ಯಾರ್ಥಿನಿಯರು ಸಮವಸ್ತ್ರ ಮಾತ್ರ ಧರಿಸತಕ್ಕದ್ದು ಎಂದು ಆದೇಶ ಹೊರಡಿಸಿತು. ಹಿಜಾಬ್ ತಲೆವಸ್ತ್ರ ಸಲ್ಲ ಎಂದು ತೀರ್ಪು ನೀಡಿತು.

ಫೆಬ್ರವರಿ 10ರಂದು ಕರ್ನಾಟಕ ಉಚ್ಚ ನ್ಯಾಯಾಲಯವು ಯಾವುದೇ ಧಾರ್ಮಿಕ ವಸ್ತ್ರ ಶಾಲಾ ಕಾಲೇಜುಗಳಲ್ಲಿ ಧರಿಸುವಂತಿಲ್ಲ ಎಂದು ಮಧ್ಯಂತರ ತೀರ್ಪು ನೀಡಿತು. ಇದು ಕರ್ನಾಟಕದ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯು ಹಿಜಾಬ್ ಮತ್ತು ಬುರ್ಖಾ ತೊಡದಂತೆ ನಿರ್ಬಂಧಿಸಿತು.

2022ರ ಮಾರ್ಚ್ 15ರಂದು ಹಿಜಾಬ್ ನಿಷೇಧವನ್ನು ಉಚ್ಚ ನ್ಯಾಯಾಲಯವು ಎತ್ತಿ ಹಿಡಿದು ತೀರ್ಪು ನೀಡಿತು. ಅಲ್ಲದೆ ಹಿಜಾಬ್ ತಲೆವಸ್ತ್ರ ಧರಿಸುವುದು ಇಸ್ಲಾಂ ಧರ್ಮದಲ್ಲಿ ಕಡ್ಡಾಯವಲ್ಲ ಎಂದು ಸಹ ಉಚ್ಚ ನ್ಯಾಯಾಲಯ ಹೇಳಿತು. 

(ಕೃಪೆ: ಮುಸ್ಲಿಮ್ ಮಿರರ್.ಕಾಮ್)



Join Whatsapp