ಕನ್ನಡಪರ ಸಂಘಟನೆ ತಾಲೂಕು ಅಧ್ಯಕ್ಷನ ಭೀಕರ ಹತ್ಯೆ

Prasthutha|

ದಾವಣಗೆರೆ: ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಜಗಳೂರು ತಾಲೂಕಿನ ಹೊಸಕೆರೆ ಡಾಬಾ ಬಳಿ ತಡರಾತ್ರಿ ನಡೆದಿದೆ.

- Advertisement -

ಗೌರಿಪುರ ಗ್ರಾಮದ ರಾಮಕೃಷ್ಣ (30) ಮೃತಪಟ್ಟಿರುವ ಕನ್ನಡಪರ ಹೋರಾಟಗಾರನಾಗಿದ್ದಾನೆ. ಕೃತ್ಯ ನಡೆಸಿದ ಅರ್ಜುನ್ ಹಾಗೂ ಪ್ರಶಾಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಡಾಬಾದಲ್ಲಿ ಗಲಾಟೆ:

- Advertisement -

ಕೊಲೆಯಾದ ಜಗಳೂರಿನ ನಿವಾಸಿ ಹಾಗೂ ಕನ್ನಡ ಪರ ಹೋರಾಟಗಾರ ರಾಮಕೃಷ್ಣನನ್ನು ಆರೋಪಿಗಳಾದ ಅರ್ಜುನ್ ಮತ್ತು ಪ್ರಶಾಂತ್​ ಪಾರ್ಟಿ ಮಾಡಲು ಹೊಸಕೆರೆ ಡಾಬಾಕ್ಕೆ ಕರೆಯಿಸಿಕೊಂಡಿದ್ದಾರೆ. ಮದ್ಯದ ನಶೆಯಲ್ಲಿದ್ದ ಸ್ನೇಹಿತರ ನಡುವೆ ವಾಗ್ವಾದ ಉಂಟಾಗಿದೆ. ಆ ಬಳಿಕ ಗಲಾಟೆ ಕೋಪಕ್ಕೆ ತಿರುಗಿದೆ. ಈ ವೇಳೆ ಆರೋಪಿಗಳು ಕಬ್ಬಿಣದ ರಾಡ್ ಹಾಗು ಕಲ್ಲುಗಳಿಂದ‌ ಜಜ್ಜಿ ಡಾಬಾದಲ್ಲಿಯೇ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಲು ಆರೋಪಿಗಳು ಪೂರ್ವನಿಯೋಜಿತರಾಗಿ ಬಂದಿರಬಹುದು ಎಂಬ ಶಂಕೆಯನ್ನು ಪೊಲೀಸ್ ಮೂಲಗಳು ವ್ಯಕ್ತಪಡಿಸಿವೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ:

ಇತ್ತೀಚೆಗೆ ಗ್ರಾಮ ಪಂಚಾಯತಿಯೊಂದರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಮಕೃಷ್ಣ ಹೋರಾಟಕ್ಕಿಳಿದಿದ್ದರು. ಪಿಡಿಒ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಪ್ರಕರಣದಿಂದಲೇ ಅವರ ಕೊಲೆ ನಡೆದಿದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸ್‌ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.

ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



Join Whatsapp