ಮಂಗಳೂರು: ರಾಜ್ಯಾದ್ಯಂತ ಕೋವಿಶೀಲ್ಡ್ ಲಸಿಕೆ ಕೊರತೆ ಉಂಟಾಗಿದ್ದು, ದ.ಕ. ಜಿಲ್ಲೆಯ ಶೇ. 80ರಷ್ಟು ಅರ್ಹರಿಗೆ ಇನ್ನೂ ಲಸಿಕೆ ಲಭಿಸಲಿಲ್ಲ.
ಕರಾವಳಿಯಲ್ಲಿ ಕೋವಿಶೀಲ್ಡ್ ಲಸಿಕೆ ಸಂಗ್ರಹ ಇಲ್ಲ. ಪರಿಣಾಮ, ಈಗಾಗಲೇ ಎರಡನೇ ಮತ್ತು ಬೂಸ್ಟರ್ ಡೋಸ್ ಲಸಿಕೆ ಪಡೆಯುವ ಅವಧಿ ಕಳೆದರೂ, ಲಸಿಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ.
ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದ ಮಂದಿ, ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ಲಸಿಕೆಯನ್ನು ಕೋವಿಶೀಲ್ಡ್ ಪಡೆಯಬೇಕಾಗುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿದ್ದು, ರಾಜ್ಯಾದ್ಯಂತ ಕೋವಿಶೀಲ್ಡ್ ಲಸಿಕೆಗಳ ಕೊರತೆ ಎದುರಾಗಿದೆ, ಸದ್ಯವೇ ಹೊಸ ಸಂಗ್ರಹ ಬರಲಿದೆ ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲೂ ಕೋವಿಶೀಲ್ಡ್ ಲಸಿಕೆ ಲಭ್ಯವಿಲ್ಲ. ಲಸಿಕೆ ಬಂದ ತಕ್ಷಣ ಮಾಹಿತಿ ನೀಡಲಾಗುವುದು ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.