ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ 150ನೇ ದಿನ ಹಾಗೂ ಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನದಂದು ರಾಹುಲ್ ಗಾಂಧಿ ಅವರು ತ್ರಿವರ್ಣ ಧ್ವಜವನ್ನು ಹಾರಿಸುವುದರೊಂದಿಗೆ ಮುಕ್ತಾಯಗೊಳ್ಳಲಿದೆ.
ಯಾತ್ರೆಯ ಸಮಾರೋಪದಲ್ಲಿ ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೇರಿದಂತೆ ವಿರೋಧ ಪಕ್ಷಗಳ ಅನೇಕ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ.
‘ಕನ್ಯಾಕುಮಾರಿಯಿಂದ ಆರಂಭವಾಗಿರುವ ಯಾತ್ರೆಯು 108 ದಿನಗಳಲ್ಲಿ ಇದುವರೆಗೆ ಒಟ್ಟು 3,122 ಕಿ.ಮೀ. ಸಂಚರಿಸಿದೆ. ಯಾತ್ರೆಯಲ್ಲಿ ರಾಹುಲ್ ಅವರು ಇದುವರೆಗೆ ವಿವಿಧ ಗುಂಪುಗಳೊಂದಿಗೆ 87 ಸಂವಾದಗಳನ್ನು ನಡೆಸಿದ್ದಾರೆ. 95 ಬೀದಿ ಸಭೆಗಳನ್ನು ನಡೆಸಿದ್ದಾರೆ. ಸಾರ್ವಜನಿಕ ಮಟ್ಟದ 10 ದೊಡ್ಡ ಸಭೆಗಳನ್ನು ಹಾಗೂ 9 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ’ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ (ಸಂಘಟನೆ) ಹಾಗೂ ಜೈರಾಂ ರಮೇಶ್ (ಸಂವಹನ) ಹೇಳಿದ್ದಾರೆ.