ಮಂಗಳೂರು: ಪ್ರಯಾಣಿಕ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ 18 ಗ್ರಾಂ ತೂಕದ ಚಿನ್ನದ ಬಳೆಯನ್ನು ಬಸ್ ಚಾಲಕ ಹಾಗೂ ಬಸ್ ಕಂಡೆಕ್ಟರ್ ಸುರಕ್ಷಿತವಾಗಿ ಮಹಿಳೆಗೆ ಪೊಲೀಸರ ಮೂಲಕ ಹಸ್ತಾಂತರಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ.
ಜನವರಿ 1ರಂದು ಮಂಗಳೂರಿನಿಂದ ಉಳ್ಳಾಲ ಕಡೆಗೆ ಶಾಲಿಮಾರ್ (ರೋಟ್ ನಂಬರ್ 44(C)) ಬಸ್’ನಲ್ಲಿ ಬಿ.ಸಿ.ರೋಡ್ ಮೂಲದ ಮಹಿಳೆ ತಸ್ಲಿಮಾ ಫಾರೂಕ್ ಎಂಬವರು ಉಳ್ಳಾಲದ ತನ್ನ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತಾಜ್ ಮಹಲ್ ಹಾಲ್’ಗೆ ಬಂದಿದ್ದರು. ಈ ವೇಳೆ ಬಸ್’ನಲ್ಲಿ 18 ಗ್ರಾಂ ಬಂಗಾರದ ಬಳೆಯನ್ನು ಕಳೆದುಕೊಂಡಿದ್ದರು.
ಬಸ್’ನ ಕಂಡಕ್ಟರ್ ಇಬ್ರಾಹಿಂ ಮಂಜನಾಡಿ ಸ್ವಲ್ಪ ಹೊತ್ತಿನ ಬಳಿಕ ಚಿನ್ನದ ಬಳೆ ನೋಡಿದ್ದಾರೆ. ತಕ್ಷಣ ಅವರು ಚಾಲಕ ನಿಸಾರ್ ಅಹಮ್ಮದ್ ಅವರ ಗಮನಕ್ಕೆ ತಂದಿದ್ದಾರೆ. ಅವರಿಬ್ಬರೂ ಈ ವಿಷಯವನ್ನು ಶಾಲಿಮಾರ್ ಬಸ್’ನ ಮಾಲಿಕರಾದ ಅಬ್ದುಲ್ ರಝಾಕ್ ಶಾಲಿಮಾರ್’ಗೆ ಕರೆ ಮಾಡಿ ತಿಳಿಸಿದ್ದಾರೆ. ಅಬ್ದುಲ್ ರಝಾಕ್ ಅವರು ಈ ವಿಷಯವನ್ನು ಉಳ್ಳಾಲ ಪೊಲೀಸರಿಗೆ ತಿಳಿಸಿದ್ದರು.
ಜನವರಿ 2ರಂದು ಉಳ್ಳಾಲ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಶಿವಕುಮಾರ್ ಅವರ ಮೂಲಕ ಬಳೆಯನ್ನು ಕಳೆದುಕೊಂಡ ಮಹಿಳೆಗೆ ಹಸ್ತಾಂತರಿಸಲಾಯಿತು.
ಬಸ್ ಕಂಡೆಕ್ಟರ್, ಚಾಲಕನ ಪ್ರಾಮಾಣಿಕ ನಡತೆಯನ್ನು ಪೊಲೀಸರು ಹಾಗೂ ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.