ಪ್ರದೀಪ್‌ ಆತ್ಮಹತ್ಯೆ : ಲಿಂಬಾವಳಿ ಬಂಧನಕ್ಕೆ ಆಮ್‌ ಆದ್ಮಿ ಪಾರ್ಟಿ ಆಗ್ರಹ

Prasthutha|

ಬೆಂಗಳೂರು : ಪ್ರದೀಪ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿರವರನ್ನು ಶೀಘ್ರವೇ ಬಂಧಿಸಿ ತನಿಖೆ ನಡೆಸಬೇಕು ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.

- Advertisement -

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣದಲ್ಲಿ ಈಶ್ವರಪ್ಪನವರ ವಿಚಾರಣೆಯನ್ನೂ ನಡೆಸದೇ ಪೊಲೀಸರು ಅವರಿಗೆ ಕ್ಲೀನ್‌ಚಿಟ್‌ ನೀಡಿದರು. ಈಗ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಪೊಲೀಸರು ಅರವಿಂದ ಲಿಂಬಾವಳಿಯವರನ್ನು ಬಂಧಿಸಿ ವಿಚಾರಣೆ ನಡೆಸದಿದ್ದರೆ ಪ್ರದೀಪ್‌ ಆತ್ಮಹತ್ಯೆ ಪ್ರಕರಣ ಕೂಡ ಅದೇ ರೀತಿ ಮುಚ್ಚಿಹೋಗುವ ಅಪಾಯವಿದೆ” ಎಂದು ಹೇಳಿದರು.

“ಒಂದುವೇಳೆ ಯಾವುದಾದರೂ ಡೆತ್‌ನೋಟ್‌ನಲ್ಲಿ ಜನಸಾಮಾನ್ಯರ ಹೆಸರಿದ್ದರೆ, ಪೊಲೀಸರು ಶೀಘ್ರವೇ ಬಂಧಿಸಿ ವಿಚಾರಣೆ ನಡೆಸುತ್ತಾರೆ. ಆದರೆ ಬಿಜೆಪಿಯ ಸಚಿವರು ಅಥವಾ ಶಾಸಕರ ಹೆಸರಿದ್ದರೆ ಖುಲಾಸೆ ಮಾಡುತ್ತಾರೆ. ರಾಜ್ಯದಲ್ಲಿ ಜನಸಾಮಾನ್ಯರಿಗೆ ಒಂದು ಕಾನೂನು, ಪ್ರಭಾವಿಗಳಿಗೆ ಮತ್ತೊಂದು ಕಾನೂನು ಇದೆಯೇ? ಅರವಿಂದ ಲಿಂಬಾವಳಿಯವರಿಗೆ ಸಾಕ್ಷಿ ನಾಶಕ್ಕೆ ಅವಕಾಶ ನೀಡದೇ, ಶೀಘ್ರವೇ ಬಂಧಿಸಬೇಕು. ಪ್ರದೀಪ್‌ ಸಾವಿನಲ್ಲಿ ಅರವಿಂದ ಲಿಂಬಾವಳಿ ಪಾತ್ರವೇನೆಂಬುದು ಜನರಿಗೆ ತಿಳಿಯಬೇಕು. ಎಲ್ಲ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವ ಮೂಲಕ ಪ್ರದೀಪ್‌ರವರ ಕುಟುಂಬಕ್ಕೆ ನ್ಯಾಯ ಸಿಗಬೇಕು” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

- Advertisement -

ಮಹದೇವಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್‌ ಮೃತ್ಯುಂಜಯ ಮಾತನಾಡಿ, “ಅಧಿಕಾರದ ಮದದಲ್ಲಿರುವ ಬಿಜೆಪಿ ನಾಯಕರು ನಾನಾ ರೀತಿಯ ಅಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಪ್ರಾಮಾಣಿಕರು ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಕೆಲವು ದಿನಗಳ ಹಿಂದೆ ತುಮಕೂರಿನ ಗುತ್ತಿಗೆದಾರ ಟಿ.ಎನ್‌. ಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಬಿಜೆಪಿ ಸರ್ಕಾರದ 40% ಕಮಿಷನ್‌ ದಂಧೆ ಕಾರಣವೆಂದು ಹೇಳಲಾಗಿದೆ. ಆದರೆ ಇಂತಹ ಯಾವ ಪ್ರಕರಣದ ತನಿಖೆಯೂ ಸರಿಯಾಗಿ ನಡೆಯುತ್ತಿಲ್ಲ. ಪ್ರಭಾವಿಗಳನ್ನು ರಕ್ಷಿಸುವ ಉದ್ದೇಶದಿಂದ, ಸತ್ಯ ಹೊರಬಾರದಂತೆ ನೋಡಿಕೊಳ್ಳಲು ಬಿಜೆಪಿಯು ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ” ಎಂದು ಹೇಳಿದರು.

ಎಎಪಿ ಬೆಂಗಳೂರು ವಕ್ತಾರರಾದ ಉಷಾ ಮೋಹನ್‌, ನೆಲಮಂಗಲ ಸ್ಪರ್ಧಾಕಾಂಕ್ಷಿ ಲೋಹಿತ್‌ ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.