ಮಂಗಳೂರು: ಕಾಟಿಪಳ್ಳ ಜಲೀಲ್ ಹತ್ಯೆ ಖಂಡಿಸಿ ನಗರದ ಮಿನಿ ವಿಧಾನಸೌಧದ ಮುಂಭಾಗ SDPI ವತಿಯಿಂದ ಬೃಹತ್ ಪ್ರತಿಭಟನೆ ಮತ್ತು ಹಕ್ಕೊತ್ತಾಯ ಸಭೆ ನಡೆದಿದ್ದು, ದೊಡ್ಡ ಮಟ್ಟದಲ್ಲಿ SDPI ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನೆಯನ್ನುದ್ದೇಶಿ ಮಾತಾಡಿದ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಸಾರ್ವಜನಿಕರು ಸಂಘಪರಿವಾರದ ಸದಸ್ಯರನ್ನು ಗೂಂಡಾಗಳು ಎಂದು ಕರೆಯಬಾರದು, ಅವರು ಅದಕ್ಕೂ ಮೀರಿದವರು. ಆದ್ದರಿಂದ ಅವರನ್ನು ಉಗ್ರರು, ಭಯೋತ್ಪಾದಕರು ಎಂದೇ ಕರೆಯಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೂಂಡಾಗಿರಿಯಲ್ಲಿ ದ.ಕ. ಜಿಲ್ಲೆಯ ಪೊಲೀಸರ ಪಾತ್ರ ಕೂಡ ಇದೆ. ಎಷ್ಟೇ ದೊಡ್ಡ ಪ್ರಕರಣದಲ್ಲಿ ಭಾಗಿಯಾದರೂ ಸಂಘಪರಿವಾರದವರನ್ನು ಸ್ಟೇಷನ್ ಬೇಲ್ ಕೊಟ್ಟು ಬಿಡುಗಡೆ ಮಾಡುವ ಮೂಲಕ ಗೂಂಡಾಗಳಿಗೆ ಪೊಲೀಸರು ನೈತಿಕ ಬೆಂಬಲ ಕೊಡುತ್ತಿದ್ದಾರೆ. ನನ್ನಲ್ಲಿ ಅದಕ್ಕೆ ಬೇಕಾದಷ್ಟು ಪುರಾವೆಗಳಿವೆ. ನಾನು ಹೇಳಿದ್ದು ಸುಳ್ಳಾದರೆ ಮಂಗಳೂರಿನ ಕಮಿಷನರ್ ಪತ್ರಿಕಾಗೋಷ್ಠಿ ಮಾಡಿ ಸತ್ಯ ಏನೆಂದು ಜನರಿಗೆ ತಿಳಿಸಲಿ. ಇಲ್ಲದಿದ್ದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸಂಘಿಗಳ ಅಟ್ಟಹಾಸದಲ್ಲಿ ನಾವು ಕೂಡಾ ಶಾಮೀಲಾಗಿದ್ದೇವೆ ಎಂದು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.
ಪ್ರತಿಭಟನೆಯ ಮುಖ್ಯ ಭಾಷಣಗಾರರಾಗಿ ಮಾತನಾಡಿದ SDPI ರಾಜ್ಯ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್, SDPI ಕಾರ್ಯಕರ್ತರಾದ ನಾವು ಇಲ್ಲಿ ಒಗ್ಗೂಡಿದ್ದು ನ್ಯಾಯ ಬೇಡಲು ಅಲ್ಲ, ನಿಮಗೆ ಎಚ್ಚರಿಕೆ ನೀಡಲು ಎಂದು ಪೊಲೀಸರ ವಿರುದ್ಧ ವಾಗ್ಧಾಳಿ ಮಾಡಿದರು.
ಜಿಲ್ಲೆಗೆ ಬೆಂಕಿಕೊಡಿ, ಕಡಿಯಿರಿ, ಕೊಲ್ಲಿರಿ ಎಂದು ಪ್ರಚೋದನಾಕಾರಿ ಭಾಷಣ ಮಾಡುವ ಜಗದೀಶ ಕಾರಂತ, ಪ್ರಮೋದ್ ಮುತಾಲಿಕ್, ಕಲ್ಲಡ್ಕ ಪ್ರಭಾಕರ ಭಟ್ ಅವರಂತಹ ಸಘಪರಿವಾರದ ಮುಖಂಡರ ಮೇಲೆ ಕೇಸು ದಾಖಲಿಸಲು ಧೈರ್ಯವಿಲ್ಲದ ಪೊಲೀಸರು, ನ್ಯಾಯ ಕೇಳುವ ನಮ್ಮ ಮೇಲೆ ಹರಿಹಾಯುತ್ತಾರೆ. ಗೂಂಡಾಗಳಿಗೆ ಪರೋಕ್ಷವಾಗಿ ಪೊಲೀಸರು ಬೆಂಬಲ ನೀಡುತ್ತಿದ್ದಾರೆ. ಸಂಘಪರಿವಾರದ ಗೂಂಡಾಗಳು ಎಷ್ಟೇ ದೊಡ್ಡ ಪ್ರಕರಣದಲ್ಲಿ ಭಾಗಿಯಾದರೂ ಚಾರ್ಜ್ ಶೀಟ್’ನಲ್ಲಿ ಅಪರಾಧದ ಸ್ವರೂಪ ಬರೆಯಲು ಹಿಂದೆಮುಂದೆ ನೋಡುತ್ತಾರೆ. ಗೂಂಡಾವಾದಿ ಬೊಮ್ಮಾಯಿಯವರು ಗೂಂಡಾಗಳಿಗೆ ಸಾಥ್ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜಲೀಲ್ ಹತ್ಯೆ ವಿಚಾರದಲ್ಲಿ ನೀವು ರಾಜಕೀಯ ಮಾಡುತ್ತೀರಾ ಎಂದು ನಮ್ಮಲ್ಲಿ ಹಲವರು ಪ್ರಶ್ನೆ ಮಾಡಿದ್ದಾರೆ. ನಾವು ಕಾಂಗ್ರೆಸ್ಸಿನ ಗೋಸುಂಬೆಗಳಂತೆ ಉತ್ತರಿಸುವುದಿಲ್ಲ. ಜಲೀಲ್ ಹತ್ಯೆ ನಮಗೆ ಪಾಠ ಕಲಿಸಿದೆ. ಜಲೀಲ್ ಸಾವು ರಾಜಕಾರಣಿಗಳ ಹಿತಾಸಕ್ತಿಗಾಗಿ ನಡೆದಿದೆ. ಆದ್ದರಿಂದ ಜಲೀಲ್ ಹತ್ಯೆ ಎಂಬ ಅನ್ಯಾಯವನ್ನು ಮುಂದಿಟ್ಟು ನಾವು ರಾಜಕೀಯ ಮಾಡುತ್ತಿದ್ದೇವೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಮೂರು ತಿಂಗಳಿಗೆ ಬೊಮ್ಮಾಯಿಯವರ ಅಧಿಕಾರ ಕೊನೆಯಾಗುತ್ತದೆ. ನಮ್ಮನ್ನು ನೀವು ವಿಧಾನಸೌಧಕ್ಕೆ ಕಳುಹಿಸಿಕೊಡಿ, ನಾವು ಸದನದಲ್ಲಿ ಕೂತು ಈ ಸಂಘಿ ಗೂಂಡಾಗಳನ್ನು ಹೆಡೆಮುರಿ ಕಟ್ಟಲು ಇಲ್ಲಿನ ಪೊಲೀಸರಿಗೆ ಆರ್ಡರ್ ಪಾಸ್ ಮಾಡುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ SDPI ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ದ.ಕ. ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಝ್ ಕಡಂಬು ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿ ಬಿಜೆಪಿ ಸರಕಾರ, ಸಂಘ ಪರಿವಾರ ಮತ್ತು ದ.ಕ ಜಿಲ್ಲೆ ಪೊಲೀಸ್ ಇಲಾಖೆಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.