ಶಿವಮೊಗ್ಗ: ದ್ವೇಷ ಭಾಷಣ ಮಾಡಿದ್ದ ಭೋಪಾಲ್ನ ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ.
ಡಿ.25ರಂದು ಶಿವಮೊಗ್ಗದಲ್ಲಿ ನಡೆದಿದ್ದ ಹಿಂದೂ ಜಾಗರಣ ವೇದಿಕೆಯ ತ್ರೈವಾರ್ಷಿಕ ಸಮ್ಮೇಳನದಲ್ಲಿ ಪ್ರಜ್ಞಾ ಸಿಂಗ್ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಸಂಸದೆ ವಿರುದ್ಧ ಪ್ರಕರಣ ದಾಖಲಿಸುವಂತೆ ದೆಹಲಿ ಮೂಲದ ಉದ್ಯಮಿಯೊಬ್ಬರು ಟ್ವಿಟರ್ ಮೂಲಕ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರಿಗೆ ದೂರು ನೀಡಿದ್ದು, ದ್ವೇಷ ಭಾಷಣ ಮಾಡುವ ಮೂಲಕ ಸಾಧ್ವಿಯವರು ಸಾಮಾಜಿಕ ಸ್ವಾಸ್ಥ್ಯ ಕದಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 153/ಎ, 153/ಬಿ, 268, 295–ಎ, 298, 504, 508, 1860 ಅಡಿ ಎಫ್ಐಆರ್ ದಾಖಲಿಸಬೇಕು ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಲ್ಲದೆ ಮುಖ್ಯಮಂತ್ರಿ ಬೊಮ್ಮಾಯಿಗೂ ಟ್ಯಾಗ್ ಮಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ ದೂರು
ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಕೂಡ ಪ್ರಜ್ಞಾಸಿಂಗ್ ವಿರುದ್ಧ ಶಿವಮೊಗ್ಗ ಎಸ್ಪಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, “ಪ್ರಜ್ಞಾಸಿಂಗ್ ಠಾಕೂರ್ ಅವರು ವಿವಿಧ ಸಮುದಾಯಗಳ ಮಧ್ಯೆ ಸಂಘರ್ಷವನ್ನುಂಟು ಮಾಡುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ನಮ್ಮ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ಮುಂದೆ ಎಂಥ ಸಂದರ್ಭ ಬರುತ್ತದೋ ಗೊತ್ತಿಲ್ಲ. ಆತ್ಮ ರಕ್ಷಣೆಗಾಗಿ ನಾವು ದಾಳಿ ಮಾಡಬೇಕಾಗುತ್ತದೆ. ನಮ್ಮ ಹೆಣ್ಣು ಮಕ್ಕಳ ಸಂರಕ್ಷಣೆಗಾಗಿ ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತವಾಗಿಸಿ ಸಿದ್ಧವಾಗಿಟ್ಟುಕೊಳ್ಳಿ. ಹೆಣ್ಣು ಮಕ್ಕಳನ್ನು ನಡೆದಾಡುವ ಆಟಂ ಬಾಂಬ್ಗಳಂತೆ ಸಿದ್ಧಪಡಿಸಬೇಕು. ಧರ್ಮ ತಾಯಿಯ ರೂಪ. ಜನ್ಮಭೂಮಿ ಕೂಡ ತಾಯಿಯ ರೂಪ. ಹಿಂದೂಗಳು ಸತ್ಯ ಮತ್ತು ಧರ್ಮದಲ್ಲಿ ನಂಬಿಕೆ ಇಟ್ಟವರು. ಶಿವಾಜಿ ಮಹಾರಾಜರ ಸ್ಫೂರ್ತಿಯಲ್ಲಿ ಬೆಳೆದು ಬಂದಿರುವ ನಮಗೆ ಧರ್ಮ ಸಂರಕ್ಷಣೆಗೆ ಜೀವ ಕೊಡುವುದು ಗೊತ್ತಿದೆ. ಜೀವ ತೆಗೆಯುವುದೂ ಗೊತ್ತಿದೆ” ಎಂದು ಡಿ.25ರಂದು ಶಿವಮೊಗ್ಗದಲ್ಲಿ ನಡೆದಿದ್ದ ಹಿಂದೂ ಜಾಗರಣ ವೇದಿಕೆಯ ತ್ರೈವಾರ್ಷಿಕ ಸಮ್ಮೇಳನದಲ್ಲಿ ಪ್ರಜ್ಞಾ ಸಿಂಗ್ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು.