ನವದೆಹಲಿ: ಜಿ20 ಆತಿಥ್ಯ ವಹಿಸಿರುವ ಭಾರತವು ‘ಶಾಂತಿ ಸೂತ್ರ’ದ ಅನುಷ್ಠಾನಕ್ಕೆ ಬೆಂಬಲ ನೀಡಬೇಕೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ.
ಸೋಮವಾರ ಝೆಲೆನ್ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಇದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಪ್ರಾರಂಭಿಸಿದ ಫೆಬ್ರವರಿ 24 ರ ನಂತರ ಮೋದಿ ಮತ್ತು ಝೆಲೆನ್ಸ್ಕಿ ನಡುವಿನ ನಾಲ್ಕನೇ ದೂರವಾಣಿ ಸಂಭಾಷಣೆಯಾಗಿದೆ.
ದೂರವಾಣಿ ಸಂಭಾಷಣೆಯ ನಂತರ, ಝೆಲೆನ್ಸ್ಕಿ ಟ್ವೀಟ್ ಮಾಡಿ, ‘ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದೆ. ಜಿ20 ಅಧ್ಯಕ್ಷ ಸ್ಥಾನ ಪಡೆದಿದ್ದಕ್ಕಾಗಿ ಅಭಿನಂದಿಸಿದ್ದೇನೆ. ಶಾಂತಿ ಸೂತ್ರವನ್ನು ನಾನು ಇದೇ (ಜಿ20) ವೇದಿಕೆಯಲ್ಲಿಯೇ ಪ್ರಸ್ತಾಪ ಮಾಡಿದ್ದೆ. ಈಗ ಅದರ ಅನುಷ್ಠಾನಕ್ಕಾಗಿ ಭಾರತದ ಕ್ರಮವನ್ನು ನಿರೀಕ್ಷಿಸುತ್ತಿದ್ದೇನೆ. ವಿಶ್ವಸಂಸ್ಥೆಯಲ್ಲಿ ನೀಡಿದ ಬೆಂಬಲಕ್ಕಾಗಿ ನಾನು ಇದೇ ವೇಳೆ ಧನ್ಯವಾದ ಹೇಳಿದ್ದೇನೆ’ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಝೆಲೆನ್ಸ್ಕಿ ಅವರು 10 ಅಂಶಗಳ ಶಾಂತಿ ಸೂತ್ರ ಪಸ್ತಾಪಿಸಿದ್ದರು. ಇದರಲ್ಲಿ, ವಿಕಿರಣ ಮತ್ತು ಪರಮಾಣು ಭದ್ರತೆ, ಆಹಾರ ಭದ್ರತೆ, ಯುದ್ಧಪರಾಧಕ್ಕೆ ಶಿಕ್ಷೆ, ಉಕ್ರೇನ್ ನಿಂದ ರಷ್ಯಾದ ಸೇನೆಯನ್ನು ಹಿಂದಕ್ಕೆ ಪಡೆಯುವ ಅಂಶಗಳು ಇದ್ದವು.