ನವದೆಹಲಿ : ಫಿರೋಝ್ ಶಾ ಕೋಟ್ಲಾ ಮೈದಾನದಲ್ಲಿ ಬಿಜೆಪಿ ನಾಯಕರಾಗಿದ್ದ ದಿವಂಗತ ಅರುಣ್ ಜೇಟ್ಲಿ ಅವರ ಪ್ರತಿಮೆ ಸ್ಥಾಪನೆಯ ನಿರ್ಧಾರವನ್ನು ಖಂಡಿಸಿ, ಸ್ಪಿನ್ ದಂತಕತೆ ಬಿಷನ್ ಸಿಂಗ್ ಬೇಡಿ, ಪ್ರೇಕ್ಷಕ ಸ್ಟಾಂಡ್ ಗೆ ಇಡಲಾಗಿದ್ದ ತಮ್ಮ ಹೆಸರನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯಲ್ಲಿನ ತಮ್ಮ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಡಿಡಿಸಿಎ ನಿಲುವನ್ನು ಖಂಡಿಸಿರುವ ಬಿಷನ್ ಸಿಂಗ್ ಬೇಡಿ, ಸ್ವಜನಪಕ್ಷಪಾತವನ್ನು ಉತ್ತೇಜಿಸುವ ಹಾಗೂ ಆಡಳಿತಗಾರರನ್ನು ಕ್ರಿಕೆಟಿಗರಿಗಿಂತಲೂ ಮೇಲಾಗಿ ಕಾಣುವ ದೃಷ್ಟಿಕೋನವನ್ನು ವಿರೋಧಿಸಿದ್ದಾರೆ.
ಅರುಣ್ ಜೇಟ್ಲಿ ಅವರ ಪುತ್ರ, ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅವರಿಗೆ ಬರೆದಿರುವ ಪತ್ರದಲ್ಲಿ ಬಿಷನ್ ಸಿಂಗ್ ಬೇಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಅಪಾರ ಸಹಿಷ್ಣುತೆ ಮತ್ತು ತಾಳ್ಮೆಯ ಮನುಷ್ಯನಾದ ನಾನು ಎಂದು ಹೆಮ್ಮೆ ಪಟ್ಟುಕೊಳ್ಳುತ್ತೇನೆ. ಆದರೆ, ನನಗೀಗ ಭಯವಿದ್ದು, ಡಿಡಿಸಿಎ ನಿಜವಾಗಿಯೂ ನನ್ನನ್ನು ಪರೀಕ್ಷಿಸಿದ್ದು, ಈ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣವಾಗಿದೆ. ಹೀಗಾಗಿ ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರೇಕ್ಷಕ ಸ್ಟಾಂಡ್ ನಿಂದ ನನ್ನ ಹೆಸರನ್ನು ತೆಗೆಯುವಂತೆ ನಾನು ವಿನಂತಿಸುತ್ತೇನೆ. ಅಲ್ಲದೆ, ನಾನು ಡಿಡಿಸಿಎ ಸದಸ್ಯತ್ವವನ್ನೂ ತ್ಯಜಿಸುತ್ತೇನೆ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.