ನವದೆಹಲಿ: ಜಗತ್ತಿನಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸೇರಿದಂತೆ 4 ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ‘RT-PCR ಪರೀಕ್ಷೆ’ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಚೀನಾ ಮತ್ತು ಇತರ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್’ನಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ -19 ಪತ್ತೆಗಾಗಿ ಆರ್’ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ಹೇಳಿದ್ದಾರೆ.
ಇನ್ನು ಈ ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರೋಗ್ಯ ಸ್ಥಿತಿಯನ್ನು ಘೋಷಿಸಲು ‘ಏರ್ ಸುವಿಧಾ’ ಫಾರ್ಮ್ ಅನ್ನು ಭರ್ತಿ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು. ಯಾವುದೇ ಪ್ರಯಾಣಿಕರಲ್ಲಿ ಕೋವಿಡ್ ರೋಗಲಕ್ಷಣಗಳು ಅಥವಾ ಕೋವಿಡ್ ಪಾಸಿಟಿವ್ ಎಂದೂ ಕಂಡುಬಂದರೆ ಅವರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಅವರು ಹೇಳಿದರು.