ಗೌರಿಬಿದನೂರು: ನಗರಸಭೆಯಿಂದ ಭೂ ಪರಿವರ್ತನೆಗೆ ಸಂಬಂಧಿಸಿದ ದಾಖಲೆ ಕೊಡಿಸಲು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ ₹20 ಲಕ್ಷ ಲಂಚ ಪಡೆಯುತ್ತಿದ್ದ ಗೌರಿಬಿದನೂರು ನಗರಸಭೆ ಅಧ್ಯಕ್ಷೆ ಎಸ್. ರೂಪಾ ಅವರ ಪತಿ ಕೆ.ಎಸ್. ಅನಂತರಾಜು ಹಾಗೂ ಸದಸ್ಯ ಆರ್.ಪಿ. ಗೋಪಿನಾಥ್ ಸೇರಿದಂತೆ ನಾಲ್ವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನಗರಸಭೆ ಸದಸ್ಯೆ ರಾಜೇಶ್ವರಿ ಅವರ ಪತಿ ಮೈಲಾರಿ ಮತ್ತು ಮತ್ತೊಬ್ಬ ಸದಸ್ಯೆ ವರಲಕ್ಷ್ಮಿ ಅವರ ಪತಿ ಮಂಜುನಾಥ್ ಅವರನ್ನೂ ಬಂಧಿಸಲಾಗಿದೆ.
ಬೆಂಗಳೂರಿನ ರಾಜಾನುಕುಂಟೆಯ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರೆಡ್ಡಿ ಎಂಬುವರು ಗೌರಿಬಿದನೂರು ಸಮೀಪ ಎಂಟು ಎಕರೆ ಕೃಷಿ ಜಮೀನು ಖರೀದಿಸಿದ್ದರು.
ಈ ಜಮೀನಿನಲ್ಲಿ 133 ವಸತಿ ನಿವೇಶನಗಳ ಬಡಾವಣೆ ನಿರ್ಮಾಣ ಮಾಡಿದ್ದರು. ಉದ್ಯಮಿಯನ್ನು ಸಂಪರ್ಕಿಸಿದ್ದ ಆರೋಪಿಗಳು ನಗರಸಭೆಯಿಂದ ಅನುಮೋದನೆ ಕೊಡಿಸಲು ಪ್ರತಿ ಎಕರೆಗೆ ₹5 ಲಕ್ಷದಂತೆ ಒಟ್ಟು ₹40 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಉದ್ದಮಿ ರೆಡ್ಡಿ ಅವರು ಈ ಬಗ್ಗೆ ಲೋಕಾಯುಕ್ತ ಬಿ.ಎಸ್.ಪಾಟೀಲ ಅವರಿಗೆ ದೂರು ನೀಡಿದ್ದರು. ನಂತರ ರಾಜಾನುಕುಂಟೆ ಬಳಿಯ ರೆಸಾರ್ಟ್ಗೆ ಬಂದು ಹಣ ಪಡೆಯುವಂತೆ ಆರೋಪಿಗಳಿಗೆ ತಿಳಿಸಿದ್ದರು. ನಾಲ್ವರೂ ರೆಸಾರ್ಟ್ಗೆ ಬಂದು ₹20 ಲಕ್ಷ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಭೂತೇಗೌಡ ನೇತೃತ್ವದ ತಂಡ ಅವರನ್ನು ಬಂಧಿಸಿದೆ.