ಸ್ಯಾನ್ ಫ್ರಾಸಿಸ್ಕೋ : ಎಲಾನ್ ಮಸ್ಕ್ ವಿರುದ್ಧ ವರದಿ ಪ್ರಕಟ ಮಾಡಿದ್ದಕ್ಕಾಗಿ ಹಲವಾರು ಪ್ರಮುಖ ಪತ್ರಕರ್ತರ ಖಾತೆಗಳನ್ನು ಟ್ವಿಟರ್ ಅಮಾನತುಗೊಳಿಸಿದೆ.
ಗುರುವಾರ ತಡರಾತ್ರಿ, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಟೈಮ್ಸ್, ಸಿಎನ್ಎನ್ ಮುಂತಾದ ಮಾಧ್ಯಮ ಸಂಸ್ಥೆಗಳ ಪತ್ರಕರ್ತರದ್ದೂ ಸೇರಿ ಹಲವು ಪತ್ರಕರ್ತರ ಖಾತೆಯನ್ನು ಟ್ವಿಟರ್ ಅಮಾನತು ಮಾಡಿದೆ.
ಈ ಬಗ್ಗೆ ಬಳಕೆದಾರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಸ್ಕ್, ‘ಡಾಕ್ಸಿಂಗ್ (ವೈಯಕ್ತಿಕ ಮಾಹಿತಿ ಹಂಚಿಕೆ ಮಾಡುವುದರ ವಿರುದ್ಧ ಇರುವ ನಿಯಮ) ನಿಯಮ ಪತ್ರಕರ್ತರೂ ಸಹಿತ ಎಲ್ಲರಿಗೂ ಅನ್ವಯವಾಗಲಿದೆ. ಇಡೀ ದಿನ ನನ್ನ ಬಗ್ಗೆ ಟೀಕೆ ಮಾಡುವುದು ಸರಿ. ನಾನು ಇರುವ ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಹಾಗೂ ನನ್ನ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸುವ ಮಾಹಿತಿ ನೀಡುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಟೈಮ್ಸ್ ವರದಿಗಾರ ರಯಾನ್ ಮ್ಯಾಕ್ (@rmac18), ಪೋಸ್ಟ್ ಸಂಸ್ಥೆಯ ವರದಿಗಾರ ಡ್ರ್ಯೂ ಹಾರ್ವೆಲ್ (@drewharwell), ಸಿಎನ್ಎನ್ ನ ವರದಿಗಾರ ಡೋನಿ ಓ ಸುಲ್ಲಿವನ್ (@donie) ಹಾಗೂ ಮಶಾಬ್ಲೆಯ ವರದಿಗಾರ ಮ್ಯಾಟ್ ಬಿಂರ್ (@MattBinder) ಮುಂತಾದವರ ಖಾತೆ ಅಮಾನತಾಗಿದೆ.
ನನಗೆ ಯಾವುದೇ ಎಚ್ಚರಿಕೆ ನೀಡಿರಲಿಲ್ಲ. ಅಮಾನತಿಗೆ ಕಾರಣವೇನು ಎನ್ನುವುದರ ಬಗ್ಗೆ ಕಂಪನಿಯಿಂದ ನನಗೆ ಯಾವುದೇ ಇಮೇಲ್ ಬಂದಿಲ್ಲ. ಆದರೆ ಎಲಾನ್ ಮಸ್ಕ್ , ಟ್ವಿಟರ್ ಕಂಪೆನಿಯ ವಿರುದ್ಧ ವರದಿ ಪ್ರಕಟಿಸುವುದನ್ನು ಇನ್ನು ಮುಂದೆಯೂ ಮುಂದುವರೆಸುತ್ತೇನೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿಗಾರ ರಿಯಾನ್ ಮ್ಯಾಕ್ ಹೊಸ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
ಯಾರದ್ದೆಲ್ಲಾ , ಯಾವ ಕಾರಣಕ್ಕಾಗಿ ಅಮಾನತು ಮಾಡಲಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.