ಮತ್ತೆ ಉಡುಪಿಗೆ ಬರಲಿದೆ ತೇಲಿಹೋದ ಸೇತುವೆ

Prasthutha|

ಉಡುಪಿ: ಕೆಳತಿಂಗಳ ಹಿಂದೆ ಮಲ್ಪೆಯ ಕಡಲ ಕಿನಾರೆಯಲ್ಲಿ ಭಾರೀ ಅಬ್ಬರದೊಂದಿಗೆ ಉದ್ಘಾಟನೆಗೊಂಡು ಮೂರೇ ದಿನಗಳಲ್ಲಿ ಕೊಚ್ಚಿಹೋಗಿದ್ದ ತೇಲುವ ಸೇತುವೆ (ಫ್ಲೋಟಿಂಗ್ ಬ್ರಿಡ್ಜ್) ಮತ್ತೆ ನಿರ್ಮಾಣವಾಗುತ್ತಿದ್ದು ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಮುಕ್ತವಾಗಲಿದೆ.

- Advertisement -

ಈ ಕುರಿತು ಮಾಹಿತಿ ನೀಡಿದ ಮಲ್ಪೆ ಬೀಚ್ ನ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ, ಕಳೆದ ಬಾರಿಯ ತಪ್ಪು ಮತ್ತೊಮ್ಮೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದ್ದು, ಅತ್ಯುತ್ತಮ ಗುಣಮಟ್ಟದ ತೇಲುವ ಸೇತುವೆಯನ್ನು ಹೊರಗಿನಿಂದ ಆಮದು ಮಾಡಿಕೊಂಡು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

ಈ ಬಾರಿ ಹೊರ ರಾಜ್ಯ ಹಾಗೂ ರಾಜ್ಯದ ಕಡಲ ತಜ್ಞರ ತಂಡಗಳು ತೇಲುವ ಸೇತುವೆಯ ಸಾಮರ್ಥ್ಯ, ಕಾರ್ಯಕ್ಷಮತೆಯನ್ನು ಪರೀಕ್ಷೆಗೊಳಪಡಿಸಿ ದೃಢೀಕರಿಸಿವೆ.ಅಲ್ಲದೆ ತೇಲುವ ಸೇತುವೆ ಚಂಡಮಾರುತದಂತಹ ಪ್ರತಿಕೂಲ ವಾತಾವರಣವನ್ನು ತಡೆದುಕೊಳ್ಳಬಹುದೇ? ದೈತ್ಯ ಅಲೆಗಳು ಅಪ್ಪಳಿಸಿದರೆ ತಾಳಿಕೊಳ್ಳುವುದೇ ಎಂಬುದನ್ನು ವೈಜ್ಞಾನಿಕವಾಗಿ ಪರೀಕ್ಷೆ ಗೊಳಪಡಿಸಿದೆ. ಅಲೆಗಳ ಏರಿಳಿತ, ಪ್ರತಿಕೂಲ ವಾತಾವರಣ ಹಾಗೂ ಸೇತುವೆ ಅಳವಡಿಸುವ ಜಾಗವನ್ನು ಪರಿಶೀಲಿಸಿರುವ ತಂಡ ಶೀಘ್ರ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ಬಳಿಕ ತೇಲುವೆ ಸೇತುವೆ ಪ್ರವಾಸಿಗರ ಬಳಕೆಗೆ ಲಭ್ಯವಾಗಲಿದೆ ಎಂದು ಸುದೇಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

- Advertisement -

2022, ಮೇ 6ರಂದು ಮಲ್ಪೆಯಲ್ಲಿ ರಾಜ್ಯದ ಮೊದಲ ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಸಭೆ ಸಹಕಾರದಲ್ಲಿ ಮಲ್ಪೆ ಬೀಚ್ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯ ಸಂಘಟನೆಗಳು ಖಾಸಗಿಯಾಗಿ ₹ 80 ಲಕ್ಷ ವೆಚ್ಚದಲ್ಲಿ ತೇಲುವ ಸೇತುವೆ ನಿರ್ಮಿಸಿದ್ದವು. ಮೂರೇ ದಿನಗಳಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಸೇತುವೆ ಹಾಳಾಗಿತ್ತು. ಸೇತುವೆ ಹಾಳಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಆಗಿದ್ದವು.

Join Whatsapp