ವಸ್ತ್ರಸಂಹಿತೆ ವಿರೋಧಿ ಹೋರಾಟದಲ್ಲಿ ಭಾಗಿಯಾದ ಕಾರಣಕ್ಕೆ ಯುವ ಫುಟ್‌ಬಾಲ್ ಆಟಗಾರ ಅಮೀರ್ ನಸ್ರ್-ಅಜಾದಾನಿಗೆ ಇರಾನ್ ಸರ್ಕಾರ ಮರಣದಂಡನೆ ವಿಧಿಸಿದೆ. ಆದರೆ ಈ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇರಾನ್‌ನ ಇಸ್ಫಹಾನ್ ನಗರದಲ್ಲಿ ನವೆಂಬರ್ 17 ರಂದು ನಡೆದ ಸರ್ಕಾರದ ವಿರೋಧಿ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ನ ಕರ್ನಲ್ ಎಸ್ಮೇಲ್ ಚೆರಗಿ ಮತ್ತು ಇತರ ಇಬ್ಬರು ಸೈನಿಕರು ಪ್ರತಿಭಟನಾಕಾರರಿಂದ ಹತ್ಯೆಯಾಗಿದ್ದರು. ಈ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 26 ವರ್ಷದ ವೃತ್ತಿಪರ ಇರಾನಿನ ಫುಟ್‌ಬಾಲ್ ಆಟಗಾರ ಅಮೀರ್ ನಸ್ರ್-ಅಜಾದಾನಿಯನ್ನು ಎರಡು ದಿನಗಳ ಬಳಿಕ ಬಂಧಿಸಲಾಗಿತ್ತು. ಈ ವಿಷಯವನ್ನು ಇಸ್ಫಹಾನ್‌ನ ನ್ಯಾಯಾಂಗ ಮುಖ್ಯಸ್ಥ ಅಬ್ದುಲ್ಲಾ ಜಾಫಾರಿ ಖಚಿತಪಡಿಸಿದ್ದರು.
ಅಮೀರ್ ನಸ್ರ್-ಅಜಾದಾನಿಗೆ ಮರಣದಂಡನೆ ವಿಧಿಸಿರುವುದನ್ನು ವಿಶ್ವ ವೃತ್ತಿಪರ ಫುಟ್ಬಾಲ್ ಆಟಗಾರರ ಒಕ್ಕೂಟ –ಎಫ್‌ಐಎಫ್‌ಪಿಆರ್‌ಒ ತೀವ್ರವಾಗಿ ಖಂಡಿಸಿದೆ. ʻಮಹಿಳಾ ಹಕ್ಕುಗಳ ಪರವಾಗಿ ಧ್ವನಿ ಎತ್ತಿದ್ದ ಕಾರಣಕ್ಕಾಗಿ ಯುವ ಆಟಗಾರನಿಗೆ ಅತ್ಯುಗ್ರ ಶಿಕ್ಷೆ ವಿಧಿಸಿರುವುದು ಖಂಡನೀಯ ಎಂದು ಎಫ್‌ಐಎಫ್‌ಪಿಆರ್‌ಒ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ʻನಾವು ಒಗ್ಗಟ್ಟಿನಿಂದ ಅಮೀರ್‌ಗೆ ಬೆಂಬಲವಾಗಿ ನಿಲ್ಲುತ್ತೇವೆ ಮತ್ತು ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆʼ ಎಂದು ಟ್ವೀಟ್‌ನಲ್ಲಿ ಆಗ್ರಹಿಸಿದೆ.
ಇರಾನ್ ನ ಪ್ರೀಮಿಯರ್ ಲೀಗ್‌ನಲ್ಲಿ ರಾಹ್-ಅಹಾನ್ ಟೆಹ್ರಾನ್ ಎಫ್‌ಸಿ, ಟ್ರ್ಯಾಕ್ಟರ್ ಎಸ್‌ಸಿ, ಗೋಲ್-ಇ ರೇಹಾನ್ ತಂಡಗಳು ಹಾಗೂ ರಾಷ್ಟ್ರೀಯ ಯುವ ತಂಡವನ್ನು ನಾಸ್ರ್-ಅಜಾದಾನಿ ಪ್ರತಿನಿಧಿಸಿದ್ದಾರೆ.