ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯು ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದೆ. ಮಂಗಳವಾರ ಲುಸೈಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ, ಕಳೆದ ಬಾರಿಯ ರನ್ನರ್ ಅಪ್ ಕ್ರೊವೇಷಿಯಾ ಸವಾಲನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್ ಬುಧವಾರ ಅಲ್ಬೈತ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ಫ್ರಾನ್ಸ್-ಮೊರೊಕ್ಕೊ ತಂಡಗಳು ಮುಖಾಮುಖಿಯಾಗಲಿದೆ.
ಈ ನಡುವೆ ನಾಳೆ ನಡೆಯಲಿರುವ ಪಂದ್ಯದಲ್ಲಿ ಅರ್ಜೆಂಟಿನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಆಡುವುದು ಅನುಮಾನವಾಗಿದ್ದು, ಅಂಪೈರ್ ಜತೆ ವಾಗ್ವಾದ ನಡೆಸಿದ ಕಾರಣ ಮೆಸ್ಸಿಗೆ ಸೆಮಿಫೈನಲ್ ಪಂದ್ಯದಿಂದ ನಿಷೇಧದ ಭೀತಿ ಎದುರಾಗಿದೆ.
ಕ್ವಾರ್ಟರ್ಫೈನಲ್ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ ಮಣಿಸಿದ್ದ ಅರ್ಜೆಂಟಿನಾ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಮ್ಯಾಚ್ ರೆಫರಿ ಆಂಟೋನಿಯೊ ಮಾಟಿಯು ಲಾಹೋಜ್ ಜೊತೆ ಮೆಸ್ಸಿ ಮತ್ತು ಅರ್ಜೆಂಟಿನಾದ ಆಟಗಾರರು ತೀವ್ರ ವಾಗ್ವಾದ ನಡೆಸಿದ್ದರು. ಪಂದ್ಯದ ಬಳಿಕ ಮೆಸ್ಸಿ, ರೆಫರಿಯ ತೀರ್ಮಾನಗಳನ್ನು ಕಟುವಾಗಿ ಟೀಕಿಸಿದ್ದರು.
ಈ ಕುರಿತು ವಿಚಾರಣೆ ನಡೆಸಲು ಫಿಫಾ, ಶಿಸ್ತು ಸಮಿತಿಯನ್ನು ರಚಿಸಿದೆ. ಮೂಲಗಳ ಪ್ರಕಾರ ಮೆಸ್ಸಿಗೆ, ಮುಂದೆ ಹೀಗಾಗದಂತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುವ ಸಾಧ್ಯತೆ ಇದೆ. ಅದಾಗಿಯೂ ಒಂದು ಪಂದ್ಯದ ನಿಷೇಧ ಹೇರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಹೀಗಾದಲ್ಲಿ ನಾಳೆ ನಡೆಯಲಿರುವ ಕೊಯೇಷಿಯಾ ವಿರುದ್ಧದ ನಿರ್ಣಾಯಕ ಸೆಮಿಫೈನಲ್ ಪಂದ್ಯದಿಂದ ಮೆಸ್ಸಿ ಹೊರಗುಳಿಯಬೇಕಾಗುತ್ತದೆ.
ಫಿಫಾ ನಿಯಮಾವಳಿ 12 ಮತ್ತು 16ನೇ ವಿಧಿಯ ಪ್ರಕಾರ ಮ್ಯಾಚ್ ರೆಫ್ರಿ ಜೊತೆ ದುರ್ವರ್ತನೆ ತೋರಿದ ದೂರಿನ ಅನ್ವಯ ಅರ್ಜೆಂಟೀನಾ ವಿರುದ್ಧ ಶಿಸ್ತು ಸಮಿತಿ ವಿಚಾರಣೆ ನಡೆಸುತ್ತಿದೆ.
ಅರ್ಜೆಂಟಿನಾ – ನೆದರ್ಲ್ಯಾಂಡ್ಸ್ ನಡುವಿನ ಪಂದ್ಯದ ವೇಳೆ ಹಲವು ಬಾರಿ ಆಟಗಾರರು ಮತ್ತು ಕೋಚ್ ಸಿಬ್ಬಂದಿ ನಡುವೆ ವಾಗ್ವಾದ-ತಳ್ಳಾಟಗಳು ನಡೆದಿತ್ತು. ಪಂದ್ಯ ಮುಗಿದ ಬಳಿಕವೂ ಇದು ಮುಂದುವರೆದಿತ್ತು. ನೆದರ್ಲ್ಯಾಂಡ್ಸ್ ಕೋಚ್ ಲೂಯಿಸ್ ವಾನ್ ಗಲ್ ಬಳಿ ತೆರಳಿದ್ದ ಮೆಸ್ಸಿ ಮಾತಿನ ಚಕಮಕಿ ನಡೆಸಿದ್ದರು. ಪಂದ್ಯದಲ್ಲಿ ರೆಫರಿ ಆಂಟೋನಿಯೊ ಮಾಟಿಯು ಲಾಹೋಜ್ ಅವರು, ಲಿಯೋನೆಲ್ ಮೆಸ್ಸಿ, ಅರ್ಜೆಂಟಿನಾದ ಸಹಾಯಕ ಕೋಚ್ ಸೇರಿದಂತೆ ಬರೋಬ್ಬರಿ 16 ಮಂದಿಗೆ ಹಳದಿ ಕಾರ್ಡ್ ತೋರಿಸಿ ಸುದ್ದಿಯಾಗಿದ್ದರು.