ನವದೆಹಲಿ : ‘ಸಲಾಂ ಆರತಿ’ ಹೆಸರು ಬದಲಿಸುವ ಕುರಿತು ರಾಜ್ಯ ಧಾರ್ಮಿಕ ಪರಿಷತ್ ನಿರ್ಧಾರ ತೆಗೆದುಕೊಂಡಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಲಾಂ ಆರತಿ’ ಹೆಸರು ಬದಲಿಸುವ ಬಗ್ಗೆ ಸಾಕಷ್ಟು ಮನವಿಗಳು ಬಂದಿದ್ದವು. ಈ ಹಿನ್ನೆಲೆ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆ ಮಾಡಿ ಹೆಸರು ಬದಲಿಸುವ ನಿರ್ಧಾರ ತೆಗೆದುಕೊಂಡಿದೆ.
ಅಲ್ಲದೆ, ಮುಜರಾಯಿ ಇಲಾಖೆ ಹೆಸರು ಬದಲಿಸುವ ಪ್ರಸ್ತಾಪವೂ ಇದೆ. ಯಾವುದೇ ಹೆಸರನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲ. ಈ ಬಗ್ಗೆ ತಜ್ಞರು, ಇತಿಹಾಸಕಾರರು, ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಬೇಕು ಅವರ ಅಭಿಪ್ರಾಯ ಪಡೆದು ಬಳಿಕ ಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.