ನಿಶ್ಚಿತಾರ್ಥದಂದೇ ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನಾಪ್: 6 ತಾಸಿನಲ್ಲೇ ಆರೋಪಿಗಳ ಸೆರೆ

Prasthutha|

ಹೈದರಾಬಾದ್: ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಮದುವೆಯಾಗುತ್ತಿದ್ದಾಳೆ ಎಂದರಿತ ಪ್ರೇಮಿಯೊಬ್ಬ, ನಿಶ್ಚಿತಾರ್ಥದ ದಿನ ಆಕೆಯ ಮನೆಗೆ ತನ್ನ 100 ಅಧಿಕ ಬೆಂಬಲಿಗರೊಂದಿಗೆ ಬಂದು ಕುಟುಂಬಸ್ಥರನ್ನು ಥಳಿಸಿ ಪ್ರಿಯತಮೆಯನ್ನು ಅಪಹರಿಸಿದ ಆಘಾತಕಾರಿ ಘಟನೆ ನಡೆದಿದೆ.

- Advertisement -

ಕುಟುಂಬಸ್ಥರು ನೀಡಿದ ದೂರಿನ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿ ಯುವತಿಯನ್ನು ರಕ್ಷಿಸಿದ್ದಾರೆ.

ನವೀನ್ ರೆಡ್ಡಿ (29) ಬಂಧಿತ ಆರೋಪಿ. 100 ಜನರನ್ನು ಕರೆದುಕೊಂಡು ಬಂದು ಯುವತಿಯ ಕುಟುಂಬಸ್ಥರ ಮೇಲೆ ದೊಣ್ಣೆ, ಕಬ್ಬಿಣದ ರಾಡ್’ನಿಂದ ಥಳಿಸಿ, ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲದೇ, ಘಟನೆಯಲ್ಲಿ ಭಾಗಿಯಾದ 8 ಜನರನ್ನು ಬಂಧಿಸಲಾಗಿದೆ.

- Advertisement -

ಮನ್ನೆಗುಡ ಪ್ರದೇಶದ ನಿವಾಸಿಯಾದ ಯುವತಿ 2021ರಿಂದ ನವೀನ್ ರೆಡ್ಡಿಯನ್ನು ಪ್ರೀತಿಸುತ್ತಿದ್ದಳು. ಬ್ಯಾಡ್ಮಿಂಟನ್ ತರಬೇತಿ ಕೇಂದ್ರದಲ್ಲಿ ಇಬ್ಬರ ಪರಿಚಯವಾಗಿತ್ತು. ಬಳಿಕ ಇಬ್ಬರೂ ಅನ್ಯೋನ್ಯವಾಗಿದ್ದು, ಗೋವಾ, ವಿಶಾಖಪಟ್ಟಣ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಇದು ಎರಡೂ ಕುಟುಂಬಗಳಿಗೆ ಗೊತ್ತಾಗಿ ವಿವಾಹಕ್ಕೆ ಸಂಬಂಧಿಸಿದಂತೆ ಮನಸ್ತಾಪ ಉಂಟಾಗಿತ್ತು.

ಕುಟುಂಬಸ್ಥರ ವಿರೋಧದಿಂದ ಯುವತಿ ನವೀನ್ ರೆಡ್ಡಿಯಿಂದ ದೂರವಾಗಿದ್ದಳು. ಆದರೆ, ಪ್ರೇಮಿ ನವೀನ್ ಆಕೆಯ ಮೊಬೈಲ್’ಗೆ ಕರೆ, ವಾಟ್ಸ್’ಆ್ಯಪ್ ಸಂದೇಶ ಕಳುಹಿಸಿ ಮದುವೆಗೆ ಒತ್ತಾಯಿಸುತ್ತಿದ್ದ. ಅಲ್ಲದೇ, ಬೆದರಿಕೆಯೂ ಹಾಕಿದ್ದನಂತೆ. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಪೊಲೀಸರು ನವೀನ್ ರೆಡ್ಡಿಯನ್ನು ಬಂಧಿಸಿದ್ದರು.

ಬಳಿಕ ಜಾಮೀನಿನ ಮೇಲೆ ಹೊರಬಂದ ನವೀನ್, ಯುವತಿಯ ಮನೆಯ ಪಕ್ಕದಲ್ಲೇ ರೆಸ್ಟೋರೆಂಟ್ ಆರಂಭಿಸಿದ್ದನು.

ಇತ್ತ ಯುವತಿಗೆ ಕುಟುಂಬಸ್ಥರು ಬೇರೊಬ್ಬ ವರನ ಜೊತೆ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾರೆ. ಇದು ಪ್ರೇಮಿ ನವೀನ್ ರೆಡ್ಡಿಗೆ ಗೊತ್ತಾಗಿದೆ. ಇದರಿಂದ ಕುಪಿತಗೊಂಡ ಆತ 5 ಕಾರು, ಬೈಕ್’ಗಳಲ್ಲಿ 100ಕ್ಕೂ ಅಧಿಕ ಸಹಚರರನ್ನು ಕರೆದುಕೊಂಡು ಬಂದು ಯುವತಿಯ ಮನೆಯ ಮೇಲೆ ದಾಳಿ ಮಾಡಿದ್ದಾನೆ. ಅಂದು ಯುವತಿಯ ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೊಣ್ಣೆಗಳಿಂದ ಸಿಕ್ಕಸಿಕ್ಕವರನ್ನು ಥಳಿಸಲಾಗಿದೆ. ತಡೆಯಲು ಬಂದ ಯುವತಿಯ ತಂದೆಗೂ ತೀವ್ರವಾಗಿ ಥಳಿಸಿದ್ದಾರೆ. ಬಳಿಕ  ನವೀನ್ ರೆಡ್ಡಿ ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಯುವತಿಯನ್ನು ಅಪಹರಿಸಿದ್ದಾನೆ.

ಘಟನೆಯ ವೇಳೆ ಪೊಲೀಸ್ ಕಂಟ್ರೋಲ್ ರೂಮ್’ಗೆ ಕರೆ ಮಾಡಿ ಮಾಹಿತಿ ನೀಡಲಾಗಿದ್ದರೂ ಪೊಲೀಸರು ಸ್ಥಳಕ್ಕೆ ಬರದೇ ನಿರ್ಲಕ್ಷ್ಯ ತೋರಿದ್ದರ ವಿರುದ್ಧ ಕುಟುಂಬಸ್ಥರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು. ಅಲ್ಲದೇ, ಯುವಕನ ರೆಸ್ಟೋರೆಂಟ್ ಅನ್ನು ಸುಟ್ಟು ಹಾಕಲಾಗಿದೆ.

6 ತಾಸಿನಲ್ಲೇ ರಕ್ಷಣೆ:

ಯುವತಿಯನ್ನು ಮನೆಯಿಂದ ಅಪಹರಿಸಿದ ಬಳಿಕ ದೂರು ನೀಡಿದ ಕುಟುಂಬಸ್ಥರು ಪತ್ತೆಗೆ ಮನವಿ ಮಾಡಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಯುವತಿಯ ಸಮೇತ ಆರೋಪಿಯನ್ನು 6 ತಾಸಿನಲ್ಲೇ ಪತ್ತೆ ಮಾಡಿದ್ದಾರೆ. ಪ್ರೇಮಿ ಮತ್ತು 8 ಜನರನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿ ಯುವತಿಯನ್ನು ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.

ವಿಚಾರಣೆಯ ವೇಳೆ ಪ್ರೇಮಿ ನವೀನ್ ರೆಡ್ಡಿ, ತಾವಿಬ್ಬರೂ ಕಳೆದ ವರ್ಷದ ಆಗಸ್ಟ್ 4 ರಂದು ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ತಾನು ಖರೀದಿಸಿದ ಹೊಸ ಕಾರಿಗೆ ನಾಮಿನಿಯಾಗಿದ್ದಾಳೆ. ಯುವತಿಯನ್ನು ತನ್ನಿಂದ ದೂರ ಮಾಡಲು ಕುಟುಂಬಸ್ಥರು ಸಂಚು ಮಾಡಿದ್ದಾರೆ. ಆಕೆಯನ್ನು ಬೆದರಿಸಿ ಬೇರೊಂದು ಮದುವೆ ಮಾಡಲಾಗುತ್ತಿದೆ. ಈ ಬಗ್ಗೆ ದೂರು ಕೂಡ ನೀಡಲಾಗಿದ್ದು, ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ನ್ಯಾಯಾಲಯಕ್ಕೆ ಸಾಕ್ಷ್ಯಿ ನೀಡಿದ್ದು ಪೊಲೀಸರು ಮತ್ತು ಯುವತಿಯ ಕುಟುಂಬಸ್ಥರಿಗೆ ನೋಟೀಸ್ ಕೂಡ ನೀಡಿದೆ ಎಂದು ಹೇಳಿದ್ದಾನೆ.

Join Whatsapp