ಜ.8ರಂದು ಕಾಂಗ್ರೆಸ್ ನಿಂದ ಪರಿಶಿಷ್ಟ ಜಾತಿ, ಪಂಗಡಗಳ ‘ಐಕ್ಯತಾ ಸಮಾವೇಶ’

Prasthutha|

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶವನ್ನು ಕಾಂಗ್ರೆಸ್ ಪಕ್ಷ ಜ.8ರಂದು ಚಿತ್ರದುರ್ಗದಲ್ಲಿ ನಡೆಸಲು ತೀರ್ಮಾನಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್  ತಿಳಿಸಿದ್ದಾರೆ.

- Advertisement -

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಪ್ರಕಟಿಸಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯದ ನಂತರ ಸಮಾಜದಲ್ಲಿ ಶೋಷಿತ ವರ್ಗಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಅಂದಿನಿಂದ ಇಲ್ಲಿಯವರೆಗೂ ಈ ಸಮುದಾಯಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಲೇ ಬಂದಿವೆ.  ಕರ್ನಾಟಕದಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ, ಬಡತನ ರೇಖೆಯಿಂದ ಹೊರಗೆ ಮುಖ್ಯವಾಹಿನಿಗೆ ತರಲು ಕಾನೂನಾತ್ಮಕವಾಗಿ ಕೆಲಸ ಮಾಡಿಕೊಂಡು ಬಂದಿದೆ. ಇಂದು ಬೇರೆ ಬೇರೆ ಪಕ್ಷಗಳು ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿವೆ. ಯಾವ ಪಕ್ಷಗಳು ಅವರ ಯೋಗಕ್ಷೇಮಕ್ಕೆ ಪ್ರಯತ್ನಿಸಲಿಲ್ಲ. ಪಕ್ಷದ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಪೋಟೋಗಳನ್ನು ಹಾಕಿಕೊಳ್ಳದವರು ಇಂದು ದಲಿತರ ಮನೆಗಳಲ್ಲಿ ಮಲಗಲು, ಬೇರೆ ಹೊಟೇಲ್ ನಿಂದ ಊಟ ತರಿಸಿ ತಿಂದು ಬರುತ್ತಿದ್ದಾರೆ. ಈ ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ನಮ್ಮ ಜನರಿಗೆ ನಿಮ್ಮ ಜತೆ ಇದ್ದೇವೆ. ನಿಮ್ಮ ಕ್ಷೇಮ ಕಾಪಾಡಲು ನಾವು ಇದ್ದೇವೆ ಎಂದು ಮರುಭರವಸೆ ನೀಡಲು ಸಮಾವೇಶ ಮಾಡಲು ನಾವೆಲ್ಲ ನಿರ್ಧರಿಸಿದ್ದೇವೆ ಎಂದು ಹೇಳಿದರು.

- Advertisement -

ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದು, ಅವರ ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮೇಲ್ಮನೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಲ್ಲಿ ಯಾರಾದರೂ ಒಬ್ಬರು ಭಾಗವಹಿಸಬೇಕು ಎಂದು ನಾವು ಮನವಿ ಮಾಡುತ್ತೇವೆ. ಕಾರ್ಯಕ್ರಮದಲ್ಲಿ ಈ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಆ ಮೂಲಕ ಜನಸಮುದಾಯಕ್ಕೆ ಅರಿವು ಮೂಡಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಚ್.ಸಿ ಮಹದೇವಪ್ಪ, ಎಚ್. ಆಂಜನೇಯ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



Join Whatsapp