2023 ಹೊಸ ವರ್ಷಾಚರಣೆ: ಪೊಲೀಸರ ನಿರ್ದೇಶನ ಪಾಲಿಸುವಂತೆ ಮಂಗಳೂರು ಕಮಿಷನರ್ ಶಶಿಕುಮಾರ್ ಸೂಚನೆ

Prasthutha|

ಮಂಗಳೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 2023ರ ಹೊಸ ವರ್ಷಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ನೀಡಿರುವ ಸೂಚನೆ ಹಾಗೂ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿರುತ್ತಾರೆ.
     ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸುವ ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲೀಕರು, ವ್ಯವಸ್ಥಾಪಕರು, ಆಡಳಿತ ವರ್ಗದವರು (ಒಳಾವರಣದಲ್ಲಿ ಮಾತ್ರ) ಈ ಬಗ್ಗೆ ಕಡ್ಡಾಯವಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿ, ಪೂರ್ವಾನುಮತಿ ಪಡೆದುಕೊಳ್ಳಬೇಕು.
ಡಿ.31ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸಲು ಡಿ.15ರ ಸಂಜೆ 5ಗಂಟೆಯೊಳಗೆ ಅರ್ಜಿ ಸಲ್ಲಿಸಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ನೂತನ ವರ್ಷಾಚರಣೆ ಆಚರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಕಾರ್ಯಕ್ರಮದ ಧ್ವನಿವರ್ಧಕವನ್ನು ರಾತ್ರಿ 10 ಗಂಟೆಯೊಳಗೆ (ಒಳಾವರಣದಲ್ಲಿ ಮಾತ್ರ) ಮುಕ್ತಾಯಗೊಳಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.
ರೆಸ್ಟೋರೆಂಟ್ ಮತ್ತು ಮದ್ಯಪಾನ ಸರಬರಾಜು ಮಾಡುವ ಹೋಟೆಲ್‍’ಗಳಲ್ಲಿ ಸರ್ಕಾರವು ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚಿನ ಸಮಯದಲ್ಲಿ ನೂತನ ವರ್ಷಾಚರಣೆಯ ಸಂಬಂಧ ಮದ್ಯ ವಿತರಿಸಲು ಉದ್ದೇಶಿಸಿದಲ್ಲಿ ಅಬಕಾರಿ ಇಲಾಖೆಯಿಂದ ಲಿಖಿತವಾಗಿ ಹೆಚ್ಚಿನ ಅವಧಿಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅಬಕಾರಿ ಇಲಾಖೆಯಿಂದ ಅನುಮತಿ ಪಡೆದಿದ್ದರೂ ಸಹ ಮದ್ಯ ವಿತರಣೆಯನ್ನು ರಾತ್ರಿ 11 ಗಂಟೆಯೊಳಗೆ ಮುಕ್ತಾಯಗೊಳಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸಲಾಗಿರುವ ಹೊಸ ವರ್ಷಾಚರಣೆಯ ಕಾರ್ಯಕ್ರಮ ಹಾಗೂ ಇನ್ನಿತರೆ ನೆಪದಲ್ಲಿ ಬಸ್ಸು ತಂಗುದಾಣ, ಸಾರ್ವಜನಿಕ ಉದ್ಯಾನವನಗಳು, ಕ್ರೀಡಾಂಗಣಗಳಲ್ಲಿ, ರೈಲ್ವೇ ಸ್ಟೇಷನ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಕರು ಡಿ.31ರ ರಾತ್ರಿ ಹೊಸ ವರ್ಷಾಚರಣೆಯ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
  ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಧ್ವನಿವರ್ಧಕವನ್ನು ಅಳವಡಿಸುವವರು ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಬಾಕ್ಸ್ ಮಾದರಿ ಧ್ವನಿವರ್ಧಕವನ್ನು ಅಳವಡಿಸಿಕೊಂಡು ಕಡಿಮೆ ಧ್ವನಿಯಲ್ಲಿ ಕಾರ್ಯಕ್ರಮವನ್ನು ನಡೆಸಬೇಕು. ಧ್ವನಿವರ್ಧಕದ ಧ್ವನಿ ಪ್ರಮಾಣವು ದಿ ನ್ವಾಸ್ ಪೊಲ್ಯೂಶನ್ (ರೆಗ್ಯುಲೇಶನ್ ಆ್ಯಂಡ್ ಕಂಟ್ರೋಲ್) ರೂಲ್ಸ್, 2000 ರಲ್ಲಿ ನಿಗದಿಪಡಿಸಲಾದ ಪ್ರಮಾಣವನ್ನು ಯಾವುದೇ ಕಾರಣಕ್ಕೂ ಮೀರಬಾರದು.
ಹೊಸ ವರ್ಷಾಚರಣೆಯನ್ನು ನಡೆಸಲು ಹೋಟೇಲ್, ಕ್ಲಬ್ ಅಥವಾ ವಿಶೇಷ ಕೂಟಗಳ ವ್ಯವಸ್ಥಾಪಕರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು. ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸದೇ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. 18 ವರ್ಷ ಕೆಳಗಿನವರಿಗೆ ಕಡ್ಡಾಯವಾಗಿ ಮದ್ಯ ವಿತರಿಸಕೂಡದು. ಪೋಷಕರು ಜೊತೆಯಲ್ಲಿ ಇರದ ಪಕ್ಷದಲ್ಲಿ 18 ವರ್ಷ ಕೆಳಗಿನ ಪ್ರಾಪ್ತರಿಗೆ ಯಾವುದೇ ಕಾರಣಕ್ಕೂ ಕಾರ್ಯಕ್ರಮಗಳಿಗೆ ಪ್ರವೇಶವನ್ನು ನಿರ್ಬಂಧಿಸಬೇಕು.  

ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ಅಥವಾ ಅಶ್ಲೀಲ ನೃತ್ಯ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ, ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಸದ್ರಿ ಕಾರ್ಯಪಡೆಯು ನಗರದ ಅಲ್ಲಲ್ಲಿ ಕಾರ್ಯನಿರತವಾಗಿದ್ದು ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
 ರಸ್ತೆಯಲ್ಲಿ ಅನವಶ್ಯಕವಾಗಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಛೆಗೆ ವಿರುದ್ಧವಾಗಿ ಶೂಭಕೋರುವ ನೆಪದಲ್ಲಿ ಕಿರಿಕಿರಿ ಮಾಡಬಾರದು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾ ವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಸದ್ರಿ ಕಾರ್ಯಪಡೆಯಲ್ಲಿ ಮಂಗಳೂರು ನಗರದ ಎಲ್ಲಾ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.
ವಾಹನಗಳ ವೀಲಿಂಗ್ ಮತ್ತು ಡ್ರಾಗ್ ರೇಸ್, ಬೊಬ್ಬೆ ಹಾಕುವುದು ಹಾಗೂ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ಧ ಮಾಡುವುದನ್ನು ತಡೆಗಟ್ಟಲು ಕೂಡಾ ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ. ಸದ್ರಿ ಪಡೆಯು ಮಂಗಳೂರು ನಗರದ ಎಲ್ಲಾ ಪ್ರದೇಶಗಳಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ ಹಾಗೂ  ನಗರದ ಎಲ್ಲಾ ಪ್ರದೇಶಗಳಲ್ಲಿ ಚಾಲನೆಯಲ್ಲಿರುತ್ತದೆ. ಕಾನೂನು ಉಲ್ಲಂಘಿಸುವ ಪ್ರಕರಣಗಳು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ರೀತಿ ಕ್ರಮ  ಜರುಗಿಸಲಾಗುವುದು.

- Advertisement -


        ಸಮುದ್ರ ಕಿನಾರೆಗಳಲ್ಲಿ (ಬೀಚ್ ಪ್ರದೇಶ) ಮದ್ಯಪಾನ ಮಾಡುವುದು, ಅಶ್ಲೀಲವಾಗಿ ವರ್ತಿಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ಅಥವಾ ಅಶ್ಲೀಲ ನೃತ್ಯ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರ ಮನೆಗಳ ಮುಂದೆ ವಿದ್ಯಾರ್ಥಿಗಳ ಹಾಸ್ಟೆಲ್, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಕಂಪೌಂಡ್ ನ ಒಳಗಡೆ ಶುಭಾಷಯ ಕೋರುವ ನೆಪದಲ್ಲಿ ಅನಧಿಕೃತವಾಗಿ ಯಾವುದೇ ವ್ಯಕ್ತಿ ಅಥವಾ ಗುಂಪು ಹೋಗಿ ಕಿರಿಕಿರಿ, ಅಸಭ್ಯವಾಗಿ ವರ್ತನೆ ಮಾಡುವುದನ್ನು ನಿಷೇಧಿಸಲಾಗಿದೆ. ರಸ್ತೆಯಲ್ಲಿ ಮದ್ಯಪಾನ ಮಾಡುವುದು ಮತ್ತು ಬಾಟಲಿಯನ್ನು ಎಸೆಯುವುದು, ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ನೆಪದಲ್ಲಿ ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ.
ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ವ್ಯವಸ್ಥಾಪಕರನ್ನೇ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು.
ಹೊಸ ವರ್ಷಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸುವವರು ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗ್ನಿಶಾಮಕ ಉಪಕರಣಗಳು, ತುರ್ತು ಚಿಕಿತ್ಸಾ ವಾಹನ ಹಾಗೂ ಇತರೇ ಮುಂಜಾಗ್ರತಾ ಕ್ರಮವಹಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp