ಫ್ರಾನ್ಸ್, ಬ್ರೆಜಿಲ್, ಇಂಗ್ಲೆಂಡ್, ಪೋರ್ಚುಗಲ್ ಸೇರಿದಂತೆ ಪ್ರಮುಖ ತಂಡಗಳು 16ರ ಘಟ್ಟ ಪ್ರವೇಶಿಸಿದ ಬೆನ್ನಲ್ಲೇ, ಅರ್ಜೆಂಟೀನಾ, ತನ್ನ ಪಾಲಿನ ಡೂ ಆರ್ ಡೈ ಪಂದ್ಯವನ್ನಾಡಲು ಬುಧವಾರ ತಡರಾತ್ರಿ ಕಣಕ್ಕಿಳಿಯಲಿದೆ. ಗ್ರೂಪ್ ಸಿಯ ತನ್ನ 3ನೇ ಮತ್ತು ಅಂತಿಮ ಪಂದ್ಯದಲ್ಲಿ ಅರ್ಜೆಂಟೀನಾ, ರಾಬರ್ಟ್ ಲೆವಾಂಡೋಸ್ಕಿ ಸಾರಥ್ಯದ ಪೋಲೆಂಡ್ ಸವಾಲನ್ನು ಎದುರಿಸಲಿದೆ.
ಪ್ರಿ ಕ್ವಾರ್ಟರ್ ಹಂತದ 2 ಸ್ಥಾನಕ್ಕೆ ಗ್ರೂಪ್ ಸಿಯಲ್ಲಿ 3 ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಆಡಿರುವ 2 ಪಂದ್ಯಗಳಲ್ಲಿ 1 ಗೆಲುವು ಮತ್ತು 1 ಡ್ರಾ ಸಾಧಿಸಿರುವ ಪೋಲೆಂಡ್ 4 ಅಂಕಗಳನ್ನು ಹೊಂದಿದೆ. ತಲಾ 1 ಗೆಲುವು ಮತ್ತು ಸೋಲು ಕಂಡಿರುವ ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ 3 ಅಂಕಗಳನ್ನು ಹೊಂದಿದೆ. ಸೌದಿ ತನ್ನ ಅಂತಿಮ ಪಂದ್ಯದಲ್ಲಿ ಮೆಕ್ಸಿಕೊ ವಿರುದ್ಧ ಕಣಕ್ಕಿಳಿಯಲಿದೆ. ಹೀಗಾಗಿ ಮುಂದಿನ ಹಂತಕ್ಕೇರಲು ಮೂರು ತಂಡಗಳಿಗೂ ಅಂತಿಮ ಪಂದ್ಯ ನಿರ್ಣಾಯಕವಾಗಿದೆ.
ಫುಟ್‌ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಮುನ್ನಡೆಸುತ್ತಿರುವ, ಫುಟ್‌ಬಾಲ್ ಜಗತ್ತಿನ ಬಲಿಷ್ಠ ಶಕ್ತಿಯಾದ ಅರ್ಜೆಂಟೀನಾ, ಕತಾರ್‌ನಲ್ಲಿ ಆರಂಭದಲ್ಲೇ ಎಡವಿತ್ತು. ಸೌದಿ ಅರೇಬಿಯಾ ವಿರುದ್ಧ ಯಾರೂ ನಿರೀಕ್ಷಿಸದ ರೀತಿಯಲ್ಲಿ 1-2 ಗೋಲುಗಳ ಅಂತರದಲ್ಲಿ ಸೋಲು ಕಂಡಿತ್ತು. ಆದರೆ 2ನೇ ಪಂದ್ಯದಲ್ಲಿ ಮೆಸ್ಸಿ ಮ್ಯಾಜಿಕ್ ಮೂಲಕ ಮೆಕ್ಸಿಕೊ ತಂಡವನ್ನು ಮಣಿಸಿ ಅರ್ಜೆಂಟೀನಾ ಕಮ್‌ಬ್ಯಾಕ್ ಮಾಡಿತ್ತು.
ಗ್ರೂಪ್ ಡಿಯಲ್ಲಿ ಬುಧವಾರ ರಾತ್ರಿ 8.30ಕ್ಕೆ ನಡೆಯುವ ಅಂತಿಮ ಹೋರಾಟದಲ್ಲಿ ಆಸ್ಟ್ರೇಲಿಯಾ-ಡೆನ್ಮಾರ್ಕ್ ಮುಖಾಮುಖಿಯಾಗಲಿದೆ. ಈ ಗುಂಪಿನಿಂದ ಫ್ರಾನ್ಸ್ ಈಗಾಗಲೇ ಪ್ರಿ ಕ್ವಾರ್ಟರ್ ತಲುಪಿದ್ದು, ಉಳಿದಿರುವ 1 ಸ್ಥಾನಕ್ಕಾಗಿ ಆಸ್ಟ್ರೇಲಿಯಾ-ಡೆನ್ಮಾರ್ಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದೇ ಸಮಯದಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ –ಟ್ಯುನೀಶಿಯಾ ಮುಖಾಮುಖಿಯಾಗಲಿದೆ.