ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ನಿವಾಸಿ, ಪಿಎಫ್’ಐ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಪಾಷ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಕಾಯ್ದಿರಿಸಿದ್ದ ಆದೇಶವನ್ನು ಇಂದು ಪ್ರಕಟಿಸಿದೆ.
ನಾಸಿರ್ ಪಾಷಾ ಅವರು ಪ್ರಸ್ತುತ ಬಂಧನದಲ್ಲಿದ್ದು, ಅವರು ತನ್ನ ಪತ್ನಿಯ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್ ಪಾಟೀಲ್ ಅವರು “ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) 1967ರ ಸೆಕ್ಷನ್ 3, ಉಪ ನಿಯಮ 3ರ ಅಡಿ ಪಿಎಫ್ಐ ನಿಷೇಧಿಸಿರುವುದು ಕಾನೂನು ಬಾಹಿರ. ಪಿಎಫ್ಐ ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವುದು ಸಂವಿಧಾನ ವಿರೋಧಿ ಕ್ರಮ. ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವುದಕ್ಕೆ ಮತ್ತು ಆ ನಿಷೇಧ ತಕ್ಷಣದಿಂದಲೇ ಅನ್ವಯಿಸಿರುವುದಕ್ಕೆ ಪ್ರತ್ಯೇಕ ಕಾರಣ ಆದೇಶದಲ್ಲಿ ತಿಳಿಸಿಲ್ಲ” ಎಂದು ಆಕ್ಷೇಪಿಸಿದ್ದರು.
2007-08ನೇ ಸಾಲಿನಲ್ಲಿ ಪಿಎಫ್’ಐ ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆಯಡಿ ನೋಂದಣಿಯಾಗಿದ್ದು, ಸಮಾಜದ ದೀನದಲಿತರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದು ಜಯಕುಮಾರ್ ವಾದಿಸಿದ್ದರು.
“ಪಿಎಫ್ಐಗೆ ತನ್ನ ವಾದ ಮಂಡನೆಗೆ ಕಾಲಾವಕಾಶ ನೀಡದೇ ಏಕಾಏಕಿ ನಿಷೇಧ ಆದೇಶ ಮಾಡಲಾಗಿದೆ. ಯುಎಪಿಎ ಕಾಯಿದೆಗೆ ವಿರುದ್ಧವಾಗಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು” ಎಂದು ಕೋರಿದ್ದರು.
ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.
“ಎಲ್ಲ ಆಧಾರಗಳನ್ನು ಸಂಗ್ರಹ ಮಾಡಿದ ನಂತರವೇ ಸಕಾರಣವಾಗಿಯೇ ಪಿಎಫ್ಐ ನಿಷೇಧಿಸಲಾಗಿದೆ. ಇದರಲ್ಲಿ ಕಾನೂನು ಬಾಹಿರವಾದುದೇನೂ ಇಲ್ಲ” ಎಂದರು.
ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್ 28ರಂದು ಐದು ವರ್ಷಗಳವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ದೇಶವ್ಯಾಪಿ ಪಿಎಫ್ಐ ಸಂಘಟನೆಯ ಕಚೇರಿ ಮತ್ತು ಅದರ ಸದಸ್ಯರ ನಿವಾಸಗಳ ಮೇಲೆ ದಾಳಿ ನಡೆಸಿದ್ದ ನಂತರ ಕೇಂದ್ರ ಸರ್ಕಾರ ನಿಷೇಧ ಆದೇಶ ಹೊರಡಿಸಿತ್ತು.