ಜೆರುಸಲೇಂ: ಇಸ್ರೇಲ್ –ಪ್ಯಾಲೆಸ್ತೀನ್ ನಡುವೆ ಹಿಂಸಾಚಾರ ಹೆಚ್ಚಾಗಿದ್ದು, ಇಸ್ರೇಲಿ ಗುಂಡಿನ ದಾಳಿಗೆ ಇಬ್ಬರು ಸಹೋದರರ ಸಹಿತ ಐವರು ಪ್ಯಾಲೆಸ್ತೀನ್ ಯುವಕರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ತೀನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೊಲ್ಲಲ್ಪಟ್ಟ ಇಬ್ಬರು ಸಹೋದರರನ್ನು 22 ಮತ್ತು 21 ವರ್ಷ ವಯಸ್ಸಿನ ಜವಾದ್(21) ಧಾಫ್ರ್ ರಿಮಾವಿ(22) ಎಂದು ಗುರುತಿಸಲಾಗಿದೆ. ರಮಲ್ಲಾದ ಪಶ್ಚಿಮದಲ್ಲಿರುವ ಕಾಫ್ರ್ ಐನ್ ಗ್ರಾಮದ ಬಳಿ ಸೈನಿಕರೊಂದಿಗಿನ ಘರ್ಷಣೆಯ ಸಮಯದಲ್ಲಿ ಇಸ್ರೇಲ್ ಗುಂಡಿನ ದಾಳಿಯಿಂದ ಅವರು ಕೊಲ್ಲಲ್ಪಟ್ಟಿದ್ದಾರೆ. ಇಸ್ರೇಲ್ ಸೇನೆಯ ಗುಂಡೇಟಿನಿಂದ ತಲೆಗೆ ಗಾಯಗೊಂಡಿದ್ದ ಖಲೀಲ್ ಎಂಬ ವ್ಯಕ್ತಿಯೂ ಬಳಿಕ ಮೃತಪಟ್ಟಿದ್ದಾನೆ ಎಂದು ಪೆಲೆಸ್ತೀನ್ ಆರೋಗ್ಯ ಇಲಾಖೆ ತಿಳಿಸಿದೆ.
ಇಬ್ಬರು ಸಹೋದರರು ಸೇರಿ ಐವರ ಹತ್ಯೆ ಉದ್ದೇಶಪೂರ್ವಕ ಮತ್ತು ಕ್ರೂರ ಕೊಲೆಯಾಗಿದೆ ಎಂದು ಪೆಲೆಸ್ತೀನ್ ಅಥಾರಿಟಿಯ ನಾಗರಿಕ ವಾಯುಯಾನ ಸಚಿವ ಹುಸೇನ್ ಅಲ್ ಶೈಖ್ ಪ್ರತಿಕ್ರಿಯಿಸಿದ್ದಾರೆ.
ಮೃತದೇಹಗಳನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವಾಗ ನೂರಾರು ಜನರು ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಪಾಲ್ಗೊಂಡು, ಇತ್ತೀಚಿನ ಘಟನೆಗೆ ಒಗ್ಗಟ್ಟನ್ನು ತೋರಿಸಲು ಸಾರ್ವತ್ರಿಕ ಮುಷ್ಕರ ನಡೆಸಿದರು.