ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಸಮಯ ಹತ್ತಿರವಾಗುತ್ತಿದ್ದಂತೆ ಜನರನ್ನು ತಮ್ಮತ್ತ ಸೆಳೆಯಲು ಹಲವಾರು ಕಾರ್ಯಕ್ರಗಳನ್ನು ಪಕ್ಷಗಳು ನಡೆಸುತ್ತಿವೆ. ಆದರೆ ಬಿಜೆಪಿಗರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ರೌಡಿ ಹಿನ್ನೆಲೆ ಹೊಂದಿರುವವರನ್ನೂ ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ತಲೆಮರೆಸಿಕೊಂಡಿದ್ದ ಕುಖ್ಯಾತ ಭೂಗತ ಪಾತಕಿ ಸೈಲೆಂಟ್ ಸುನಿಲ್ ಚಾಮರಾಜಪೇಟೆಯಲ್ಲಿ ಬಿಜೆಪಿ ನಾಯಕರು ಮತ್ತು ಸಂಸದ ಪಿ.ಸಿ.ಮೋಹನ್ ಅವರೊಂದಿಗೆ ರಕ್ತದಾನ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿದ್ದರು. ಅಲ್ಲದೆ, ಮಲ್ಲೇಶ್ವರಂನಲ್ಲಿ ನಡೆದ ರಾಜಕೀಯ ಕಾರ್ಯಕ್ರಮದಲ್ಲಿ ಫೈಟರ್ ರವಿ ಕಾಣಿಸಿಕೊಂಡಿದ್ದಾರೆ.
ರೌಡಿ ಹಿನ್ನೆಲೆ ಹೊಂದಿರುವ ಫೈಟರ್ ರವಿಯನ್ನು ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸಚಿವರಾದ ನಾರಾಯಣಗೌಡ, ಅಶ್ವಥ್ ನಾರಾಯಣ್, ಮಾಜಿ ಸಚಿವ ಸಿಪಿ ಯೋಗೇಶ್ವರ್ ಮುಂತಾದವರು ಈ ಸಮಾರಂಭದಲ್ಲಿ ಇದ್ದರು.
ಇದಲ್ಲದೆ ಮುಂದಿನ ಚುನಾವಣೆಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೈಲೆಂಟ್ ಸುನೀಲ್ ಕುಮಾರ್ ಸ್ಪರ್ಧಿಸುತ್ತಾನೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಈ ಬೆಳವಣಿಗೆ ಆಗುತ್ತಿದ್ದಂತೆ ಸಾಕಷ್ಟು ರಾಜಕೀಯ ಮಾತುಗಳು ಕೇಳಿ ಬರುತ್ತಿವೆ.
ಸೈಲೆಂಟ್ ಸುನೀಲ್ ವಿಚಾರವಾಗಿ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎಂಬೆಲ್ಲಾ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.
ಅಂದು ಪರಾರಿಯಾಗಿದ್ದಾರೆಂದು ಹೇಳಿದ್ದ ಸೈಲೆಂಟ್ ಸುನೀಲ್ ನಿನ್ನೆ ಬಹಿರಂಗವಾಗಿ ಹೇಗೆ ಕಾಣಿಸಿಕೊಂಡಿದ್ದ? ಅದರಲ್ಲೂ ರಾಜಕಾರಣಿಗಳ ಕಾರ್ಯಕ್ರಮದಲ್ಲೇ ಕಾಣಿಸಿಕೊಂಡು ಆತ ರಾಜಕೀಯ ಸೇರ್ಪಡೆಯಾಗುವ ಸಂದೇಶ ನೀಡಿದ್ದಾನೆ. ಆತ ಬಹಿರಂಗ ಸಮಾವೇಶ ಮಾಡಿದರೂ ಸಿಸಿಬಿ ಪೊಲೀಸರು ಮಾತ್ರ ಸುಮ್ಮನಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.