ವಿಜಯ್ ಹಝಾರೆ ಟ್ರೋಫಿ ಕ್ರಿಕೆಟ್ ಪಂದ್ಯ: ಋತುರಾಜ್ ಗಾಯಕ್ವಾಡ್ ವಿಶ್ವದಾಖಲೆಯ ಬ್ಯಾಟಿಂಗ್ ಪ್ರದರ್ಶನ

Prasthutha|

ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ವಿಶ್ವದಾಖಲೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ..

- Advertisement -

ಅಹಮದಾಬಾದ್’ನಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಋತುರಾಜ್, ಒಂದೇ ಓವರ್’ನಲ್ಲಿ 7 ಸಿಕ್ಸರ್ ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಉತ್ತರ ಪ್ರದೇಶದ ʻನತದೃಷ್ಟ ಬೌಲರ್ʼ ಶಿವಸಿಂಗ್ ಎಸೆದ 49ನೇ ಓವರ್’ನ ಎಲ್ಲಾ 7 ಎಸೆತಗಳನ್ನು (ಒಂದು ನೋಬಾಲ್ ಸೇರಿದಂತೆ) ಗಾಯಕ್’ವಾಡ್ ಸಿಕ್ಸರ್ ಬಾರಿಸಿದ್ದಾರೆ. ಶಿವಸಿಂಗ್ ಓವರ್’ನ 5ನೇ ಎಸೆತ ನೋಬಾಲ್ ಆಗಿತ್ತು. ಆ ಬಳಿಕ ದೊರಕಿದ ಫ್ರೀ ಹಿಟ್ ಎಸೆತದಲ್ಲೂ ಭರ್ಜರಿ ಸಿಕ್ಸರ್ ಸಿಡಿಸಿದ ಗಾಯಕ್ವಾಡ್ ತಮ್ಮ ದ್ವಿಶತಕ ಪೂರ್ತಿಗೊಳಿಸಿದರು.

ಏಕದಿನ ಕ್ರಿಕೆಟ್’ನಲ್ಲಿ ಒಂದೇ ಓವರ್ನಲ್ಲಿ 43 ರನ್’ಗಳಿಸಿದ ಮೊತ್ತ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರರೂ ಆಗಿರುವ ಗಾಯಕ್ವಾಡ್ ತನ್ನದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಒಂದು ಓವರ್’ನಲ್ಲಿ ಸತತ ಆರು ಸಿಕ್ಸರ್ಗಳನ್ನು ದಾಖಲಿಸಿದ ಸರ್ ಗಾರ್ಫೀಲ್ಡ್ ಸೋಬರ್ಸ್, ರವಿಶಾಸ್ತ್ರಿ, ಹರ್ಷಲ್ ಗಿಬ್ಸ್, ಯುವರಾಜ್ ಸಿಂಗ್, ರಾಸ್ ವೈಟ್ಲಿ, ಹಝರತುಲ್ಲಾ ಝಜೈ, ಲಿಯೋ ಕಾರ್ಟರ್, ಕೀರಾನ್ ಪೊಲಾರ್ಡ್ ಹಾಗೂ ತಿಸಾರಾ ಪೆರೆರ ಕ್ಲಬ್’ಗೆ ಋತುರಾಜ್ ಸೇರ್ಪಡೆಯಾಗಿದ್ದಾರೆ.

- Advertisement -

ಋತುರಾಜ್ ಗಳಿಸಿದ ಅಜೇಯ 220 ರನ್’ಗಳ ನೆರವಿನಿಂದ ಮಹಾರಾಷ್ಟ್ರ, ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5 ವಿಕೆಟ್ ನಷ್ಟದಲ್ಲಿ 330 ರನ್ ಗಳಿಸಿದೆ. ಅಂಕಿತ್  ಭವ್ನೆ ಮತ್ತು ಅಝೀಮ್  ಖಾಝಿ ತಲಾ 37 ರನ್ ಗಳಿಸಿದರು. ಉತ್ತರ ಪ್ರದೇಶ ಪರ ಕಾರ್ತಿಕ್ ತ್ಯಾಗಿ 3 ವಿಕೆಟ್ ಪಡೆದರು. 9 ಓವರ್ ಎಸೆದ ಶಿವಸಿಂಗ್ ಯಾವುದೇ ವಿಕೆಟ್ ಪಡೆಯದೆ 88 ರನ್ ಬಿಟ್ಟು ಕೊಡುವ ಮೂಲಕ ದುಬಾರಿಯಾದರು.



Join Whatsapp