ನವದೆಹಲಿ: ಹ್ಯಾಕಿಂಗ್ ವೇದಿಕೆಯೊಂದು 50 ಕೋಟಿ ವಾಟ್ಸ್ ಆ್ಯಪ್ ಬಳಕೆದಾರರ ದೂರವಾಣಿ ಸಂಖ್ಯೆ ಸೇರಿದಂತೆ ಖಾಸಗಿ ಮಾಹಿತಿಯನ್ನು ಮಾರಾಟಕ್ಕಿಟ್ಟಿದೆ ಎಂದು ಸೈಬರ್ ನ್ಯೂಸ್ ವರದಿ ಮಾಡಿದೆ.
ಡೇಟಾಸೆಟ್ ನಲ್ಲಿ 84 ದೇಶಗಳ ವಾಟ್ಸಾಪ್ ಬಳಕೆದಾರರ ಖಾಸಗಿ ಮಾಹಿತಿಯಲ್ಲದೆ, ಅಮೆರಿಕದ 3.2 ಕೋಟಿ ಬಳಕೆದಾರರ ಮಾಹಿತಿ ಮಾರಾಟಕ್ಕೆ ಲಭ್ಯವಿದೆ. ಈಜಿಪ್ಟ್, ಇಟಲಿ, ಫ್ರಾನ್ಸ್, ಯುಕೆ, ರಷ್ಯಾ ಮತ್ತು ಭಾರತದ ಬಳಕೆದಾರರ ಮಾಹಿತಿಯೂ ಲಭ್ಯವಿದೆ ಎಂದು ಜನಪ್ರಿಯ ಹ್ಯಾಕಿಂಗ್ ವೇದಿಕೆಯೊಂದು ಜಾಹೀರಾತು ನೀಡಿತ್ತು.
ಅಮೆರಿಕದ ದಾಖಲೆ ಸೆಟ್ 7,000 ಡಾಲರ್ ಗೆ , ಯುಕೆ ದಾಖಲೆಯನ್ನು ಮೌಲ್ಯ 2500 ಡಾಲರ್ ಗೆ ಮಾರಾಟ ಮಾಡುವುದಾಗಿಯೂ ಜಾಹಿರಾತಿನಲ್ಲಿ ತಿಳಿಸಲಾಗಿತ್ತು. ಜಾಹೀರಾತುದಾರರನ್ನು ಸಂಪರ್ಕಿಸಿದಾಗ ಬ್ರಿಟನ್‌ನ 1,097 ಸಂಖ್ಯೆಗಳನ್ನು ಪುರಾವೆಯಾಗಿ ಹಂಚಿಕೊಂಡಿದ್ದಾರೆ. ಸೈಬರ್ ನ್ಯೂಸ್ ಮಾಧ್ಯಮ ಸಂಸ್ಥೆಯಿಂದ ಆ ನಂಬರ್‌ಗಳನ್ನು ಪರೀಕ್ಷಿಸಲಾಗಿದ್ದು, ಎಲ್ಲವೂ ವಾಟ್ಸ್ ಆ್ಯಪ್ ಸಂಖ್ಯೆಗಳೆಂದು ಖಚಿತವಾಗಿದೆ ಎಂಬುದಾಗಿ ಸೈಬರ್ ನ್ಯೂಸ್ ವರದಿ ಹೇಳಿದೆ.
ಮಾಹಿತಿಗಳನ್ನು ಹೇಗೆ ಪಡೆಯಲಾಗಿದೆ ಎಂಬ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಬಳಕೆದಾರರು ಅಪರಿಚಿತ ಲಿಂಕ್ ಗಳಿಗೆ ಕ್ಲಿಕ್ ಮಾಡಿದಾಗ ಇಂತಹ ಮಾಹಿತಿಗಳನ್ನು ಪಡೆದಿರುವ ಶಂಕೆಯಿದೆ.