ಬಿಟ್ ಕಾಯಿನ್ ಹೂಡಿಕೆಯಿಂದ ನಷ್ಟ: ಮಗುವನ್ನು ಎದೆಗೆ ಬಿಗಿದಪ್ಪಿ ಉಸಿರುಗಟ್ಟಿಸಿ ಹತ್ಯೆಗೈದ ಟೆಕ್ಕಿ ತಂದೆ !

Prasthutha|

►ಬೆಂಗಳೂರಿನಲ್ಲೊಂದು ಕಣ್ಣೀರು ತರಿಸುವ ಘಟನೆ

- Advertisement -

ಬೆಂಗಳೂರು: ಕೋಲಾರ ತಾಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಶವ ಪತ್ತೆಯಾದ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ತನ್ನ ಕೈಯಾರೆ ಆಡಿಸಿದ್ದ ಮಗಳನ್ನು ತಾನೇ ಎದೆಗೆ ಬಿಗಿದಪ್ಪಿ ಉಸಿರುಗಟ್ಟಿಸಿ ಕೊಂದಿದ್ದೇನೆ ಎಂದು ಪೊಲೀಸರೆದುರು ಕಣ್ಣೀರು ಸುರಿಸಿದ ಗುಜರಾತ್ ಮೂಲದ ಸಾಫ್ಟ್’ವೇರ್ ಇಂಜಿನಿಯರ್ ರಾಹುಲ್’ನ ಕಥೆ ಕೇಳಿ ಪೊಲೀಸರೇ ದಂಗಾಗಿದ್ದಾರೆ.

- Advertisement -

ಘಟನೆಯ ಹಿನ್ನೆಲೆ

ಗುಜರಾತ್ ಮೂಲದ ಸಾಫ್ಟ್’ವೇರ್ ಇಂಜಿನಿಯರ್ ರಾಹುಲ್ ಪ್ರೀತಿಸಿ ಭವ್ಯ ಎಂಬ ಯುವತಿಯನ್ನು ಮದುವೆಯಾಗಿದ್ದ. ಬೆಂಗಳೂರಿನ ಬಾಗಲೂರು ಬಳಿಯ ರಾಗಾ ಅಪಾರ್ಟ್’ಮೆಂಟ್ ನಲ್ಲಿ ದಂಪತಿ ನೆಲೆಸಿದ್ದರು. ಐದಾರು ವರ್ಷಗಳ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಮೂರು ವರ್ಷದ ಹೆಣ್ಣು ಮಗು ಜಿಯಾ ಕೂಡ ಇದ್ದಳು. ಕೈತುಂಬಾ ಸಂಬಳವಿದ್ದುದರಿಂದ ಇವರದ್ದು ಸುಖೀ ಕುಟುಂಬ ಎನಿಸಿಕೊಂಡಿತ್ತು.

ಆದರೆ ಮನುಷ್ಯನಿಗೆ ಅತಿಯಾಸೆ ಬಂದಾಗ ಆತ ದಾರಿ ತಪ್ಪುತ್ತಾನೆ ಎಂಬಂತೆ ರಾಹುಲ್’ಗೆ ಇನ್ನಷ್ಟು ಸುಖಕರ ಜೀವನ ನಡೆಸಬೇಕು ಎಂಬ ಚಿಂತನೆ ಮೂಡಿದೆ. ಕಳೆದ 2016 ರಿಂದ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಲು ಆರಂಭಿಸಿದ್ದಾನೆ. ಆದರೆ ಅಲ್ಲಿ ಆತನ ಅದೃಷ್ಟ ಕೈಕೊಟ್ಟಿತ್ತು. ಬಿಟ್ ಕಾಯಿನ್ ಹೂಡಿಕೆಯಲ್ಲಿ ಸಾಕಷ್ಟು ನಷ್ಟ ಅನುಭವಿಸತೊಡಗಿದ. ಆದರೂ ಎಚ್ಚೆತ್ತುಕೊಳ್ಳದ ರಾಹುಲ್ ಮತ್ತೆ ಮತ್ತೆ ಅದರ ಮೇಲೆ ಹೂಡಿಕೆ ಮಾಡಲಾರಂಭಿಸಿದ. ಈ ಮಧ್ಯೆ ಕೆಲಸವನ್ನೂ ಕಳೆದುಕೊಂಡ ರಾಹುಲ್ ಕಳೆದ ಒಂದೂವರೆ ವರ್ಷಗಳಿಂದ ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ದ. ಅಲ್ಲಲ್ಲಿ ಸಾಲ ಮಾಡತೊಡಗಿದ. ಈ ಮಧ್ಯೆ ಸಾಲಗಾರರ ಕಾಟವೂ ಹೆಚ್ಚಾಯಿತು.

ನವೆಂಬರ್ 15ರಂದು ಮಗಳನ್ನು ಶಾಲೆಗೆ ಬಿಡಲು ಹೊರಡುತ್ತಿದ್ದಾಗ ಸಾಲಗಾರರು ಮನೆಯ ಬಳಿ ಬಂದು ನಿಂತಿದ್ದರು.  ಅವರನ್ನು ಹೇಗೋ ನಿಭಾಯಿಸಿದ ರಾಹುಲ್, ಮಗಳನ್ನು ಶಾಲೆಗೆ ಬಿಟ್ಟು ಬಂದು ನಿಮ್ಮ ಸಾಲ ತೀರಿಸುತ್ತೇನೆ ಎಂದು ಹೇಳಿ ಅವರನ್ನು ಸಾಗ ಹಾಕಿದ್ದ.

ಮಗಳನ್ನು ಶಾಲೆಗೆ ಬಿಟ್ಟುಬರುತ್ತೇನೆ ಎಂದು ಕಾರಿನಲ್ಲಿ ಹೋದ ರಾಹುಲ್ ಸೀದಾ ಮರಣವನ್ನು ಅರಸಿ ಹೊಸಕೋಟೆ ಮಾರ್ಗವಾಗಿ ಕೋಲಾರದ ಕೆಂದಟ್ಟಿ ಗ್ರಾಮದ ಕೆರೆ ಬಳಿ ಬಂದಿದ್ದಾನೆ. ಕೆರೆ ದಡದಲ್ಲಿ ಮುಂದೆ ಏನು ಮಾಡಬೇಕು ಎಂದು ತೋಚದೆ ಸುಮಾರು ಹೊತ್ತು ಕುಳಿತಿದ್ದಾನೆ. ಮನೆಗೆ ಹೋದರೆ ಸಾಲಗಾರರ ಕಾಟ, ಪತ್ನಿಗೆ ಸುಂದರ ಬದುಕು ನೀಡಲಾಗದ ವ್ಯಥೆ, ಕುಟುಂಬದವರು, ಸ್ನೇಹಿತರ ನೆನಪು….ಹೀಗೆ ಕೆಟ್ಟ ಆಲೋಚನೆಯಲ್ಲಾ ತಲೆಗೆ ಬಂದಾಗ ಕೊನೆಗೆ ಕೆರೆಗೆ ಹಾರಿ ಆತ್ಮಹತ್ಯೆಗೈಯ್ಯಲು ನಿರ್ಧರಿಸಿದ್ದಾನೆ.

ಅಷ್ಟೊತ್ತಿಗೆ ಸೂರ್ಯ ಮುಳುಗಲಾರಂಭಿಸಿದ್ದ. ಮಗಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಲು ಮೊದಲು ನಿರ್ಧರಿಸಿದ್ದ. ಆದರೆ ಮಗಳು ಬದುಕಿ ತಾನು ಸಾಯಬಾರದು ಎಂದು ಆ ಆಲೋಚನೆಯನ್ನು ಕೈಬಿಟ್ಟ. ಮೊದಲು ಮಗಳನ್ನು ಬಿಗಿದಪ್ಪಿಕೊಂಡು ಉಸಿರುಗಟ್ಟಿಸಿ ತನ್ನ ಕೈಯ್ಯಾರೆ ಸಾಯಿಸಿದ್ದಾನೆ. ನಂತರ ಮಗಳನ್ನು ಎದೆಗಪ್ಪಿಕೊಂಡು ನೀರಿಗೆ ಹಾರಿದ್ದಾನೆ. ಆದರೆ ನೀರು ಆಳವಿರಲಿಲ್ಲ. ಆತ್ಮಹತ್ಯೆ ಸಾಧ್ಯವಾಗಿಲ್ಲ. ಮಾತ್ರವಲ್ಲ ರಾಹುಲ್’ಗೆ ಸಾಯಲು ಧೈರ್ಯ ಬರಲಿಲ್ಲ. ಮಗಳ ಮೃತದೇಹವನ್ನು ಕೈಯಲ್ಲೇ ಹಿಡಿದು ದಿಕ್ಕು ತೋಚದೆ ಅರ್ಧ ನೀರಿನಲ್ಲಿ ಅರ್ಧ ಗಂಟೆ ಕಾಲ ನಿಂತಿದ್ದಾನೆ.

ಮತ್ತೊಂದೆಡೆ ಕತ್ತಲು ಆವರಿಸತೊಡಗಿದೆ. ಸಾವಿಗೆ ಹೆದರಿದ ರಾಹುಲ್ ಮಗಳ ಮೃತದೇಹವನ್ನು ಅಲ್ಲೇ ನೀರಿನಲ್ಲಿ ಬಿಟ್ಟು ಕಾರಿನ ಹತ್ತಿರ ಬಂದಿದ್ದಾನೆ. ಕಾರಿನಲ್ಲಿ ತನ್ನ ಮೊಬೈಲ್, ಪರ್ಸ್, ಎಲ್ಲವನ್ನೂ ಬಿಟ್ಟು ಒಂದು ಕಿಲೋ ಮೀಟರ್ ದೂರ ನಡೆದುಕೊಂಡು ಬಂದಿದ್ದಾನೆ. ಅಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಸಹಾಯದಿಂದ ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಡ್ರಾಪ್ ಪಡೆದುಕೊಂಡಿದ್ದಾನೆ. ಬಂಗಾರಪೇಟೆ ನಿಲ್ದಾಣದಲ್ಲಿ ಸಿಕ್ಕಿದ ರೈಲು ಹತ್ತಿ ಹೊರಟಿದ್ದಾನೆ. ಆಗ ಹೊರಟ ರಾಹುಲ್ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಹೀಗೆ ರೈಲಿನಲ್ಲಿ 4-5 ರಾಜ್ಯಗಳನ್ನು ಸುತ್ತಾಡಿದ್ದಾನೆ.

ರೈಲಿನಲ್ಲಿ ಪ್ರಯಾಣ ಮಾಡುವ ವೇಳೆಯೂ ರೈಲಿನಿಂದ ಹಾರಿ ಸಾಯಲು ಯತ್ನಿಸಿದ್ದಾನೆ. ಆದರೂ ಆತನಿಗೆ ಸಾಯಲು ಧೈರ್ಯ ಬಂದಿರಲಿಲ್ಲ. ಈ ವೇಳೆ ತನ್ನ ಪತ್ನಿ ಹಾಗೂ ಮನೆಯವರಿಗೆ ಪೋನ್ ಮಾಡಿ ನನ್ನನ್ನು ಯಾರೋ ಅಪರಿಚಿತರು ಅಪಹರಿಸಿದ್ದಾರೆ ಎಂದು ಕಿಡ್ನಾಪ್ ಕಥೆ ಕಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಪತ್ನಿ ಬಾಗಲೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ರಾಹುಲ್’ಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ರಾಹುಲ್ ಆಂಧ್ರಪ್ರದೇಶದಿಂದ ರೈಲಿನಲ್ಲಿ ಬೆಂಗಳೂರಿನತ್ತ ಹೊರಟಿದ್ದಾನೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಆತನಿಗಾಗಿ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ರೈಲಿನಿಂದ ಇಳಿಯುತ್ತಿದ್ದಂತೆ ರಾಹುಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಮಗಳನ್ನು ಹತ್ಯೆಗೈದ ವಿಷಯವನ್ನು ವಿವರಿಸುವಾಗ ಪೊಲೀಸರ ಕಣ್ಣಂಚಿನಲ್ಲೂ ನೀರು ಚಿನುಗಿತ್ತು.



Join Whatsapp