ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ರಾಜ್ಯ ಸರ್ಕಾರ ಹೆಚ್ಚಿಸಬೇಕೆಂದು ಒಕ್ಕಲಿಗ ಸಂಘ ಆಗ್ರಹಿಸಿದೆ.
ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹಾಗೂ ಶಾಸಕ ಬಾಲಕೃಷ್ಣ, ಒಕ್ಕಲಿಗ ಜನಾಂಗಕ್ಕೆ ಹಾಲಿ ಇರುವ ಶೇ 4 ಮೀಸಲಾತಿ ಪ್ರಮಾಣವನ್ನು ಶೇ.12ರಷ್ಟು ಹೆಚ್ಚಿಸಬೇಕೆಂದು ಇದೇ ಮೊದಲ ಬಾರಿಗೆ ಒತ್ತಾಯಿಸಲಾಗುತ್ತಿದೆ. ಈ ಕುರಿತಂತೆ ಬರುವ ಭಾನುವಾರ ಒಕ್ಕಲಿಗರ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಕುವೆಂಪು ಕಲಾ ಕ್ಷೇತ್ರದಲ್ಲಿ ಪ್ರಮುಖರ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.
ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲು ಕೈಗೊಳ್ಳಲಿರುವ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲು ನ.27 ರಂದು ಒಕ್ಕಲಿಗರ ಸಮುದಾಯದ ಪ್ರಮುಖ ಮುಖಂಡರ ಸಭೆ ಕರೆಯಲಾಗಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ನಮ್ಮ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಒಕ್ಕಲಿಗರ ಮೀಸಲಾತಿ ಹೆಚ್ಚಿಸುವ ವಿಚಾರವಾಗಿ ಸಮಾಜದ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಮಾಡಲಾಗುತ್ತದೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಮಹಾಸ್ವಾಮೀಜಿ ಮತ್ತು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಈ ಸಭೆ ನಡೆಯಲಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಡಿ.ವಿ. ಸದಾನಂದಗೌಡರು, ಹೆಚ್.ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ಸಚಿವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ. ಅಲ್ಲದೆ ಸಮುದಾಯದ ಎಲ್ಲಾ ಮಾಜಿ ಸಚಿವರು, ಸಂಸದರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಸಾಹಿತಿಗಳು, ಸಮಾಜದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ರೈತ ಮುಖಂಡರು, ಕಾರ್ಮಿಕರ ಮುಖಂಡರು, ನೌಕರ ವರ್ಗದವರು, ವಕೀಲರು, ವೈದ್ಯರು, ವಿದ್ಯಾರ್ಥಿಗಳು, ಚಲನಚಿತ್ರ ರಂಗದವರು, ಕಲಾವಿದರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ತಜ್ಞರು, ಸ್ಥಳೀಯ ಜನಪ್ರತಿನಿಧಿಗಳು, ಇನ್ನಿತರ ಗಣ್ಯರು ಸೇರಿದಂತೆ ರಾಜ್ಯವ್ಯಾಪ್ತಿಯಾಗಿರುವ ಸಮಾಜ ಬಂಧುಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯದ ಜನಸಂಖ್ಯೆಯಲ್ಲಿ ಶೇ.16ಕ್ಕೂ ಹೆಚ್ಚು ಅಂದರೆ, ಶೇ.20ರಷ್ಟು ಇದ್ದಾರೆ. ಒಕ್ಕಲಿಗ ಸಮುದಾಯದ ಜನಸಂಖ್ಯೆ ಇದ್ದರೂ ಜಾತಿವಾರು ಜನಗಣತಿ ಸರಿಯಾಗಿ ನಡೆದಿಲ್ಲ ಎಂಬ ಅಸಮಾಧಾನವು ಕೇಳಿಬರುತ್ತಿದೆ. ಹೀಗಾಗಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.4ರ ಮೀಸಲಾತಿ ನೀಡುತ್ತಿರುವುದು ತುಂಬಾ ಕಡಿಮೆಯಾಗಿದ್ದು, ಶೇ.12ಕ್ಕೆ ಹೆಚ್ಚಿಸಬೇಕು. ಇಲ್ಲದಿದ್ದರೆ, ಒಕ್ಕಲಿಗ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ನಿಗದಿಪಡಿಸಿರುವ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ 3ಎ ಅಡಿಯಲ್ಲಿ ಒಕ್ಕಲಿಗರ ಸಮುದಾಯ, ಒಕ್ಕಲಿಗರ ಉಪ ಪಂಗಡಗಳು ಹಾಗೂ ಇತರೆ ಜಾತಿಗಳು ಸೇರಿವೆ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜಾತಿ ಪಂಗಡದವರ ಮೀಸಲಾತಿಯನ್ನು ಅವರ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡಿರುವುದನ್ನು ರಾಜ್ಯ ಒಕ್ಕಲಿಗರ ಸಂಘವು ಸ್ವಾಗತಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಆರ್.ಹನುಮಂತರಾಯಪ್ಪ, ಆಂತರಿಕ ಲೆಕ್ಕ ಪರಿಶೋಧಕರಾದ ಡಿ.ಹನುಮಂತರಾಯಪ್ಪ, ಕಾನೂನು ಸಲಹೆ ಸಲಹೆಗಾರರಾದ ನೆಲ್ಲಿಗೆರೆ ಬಾಲು, ಬಿಐಟಿ ಅಧ್ಯಕ್ಷರಾದ ಎಂ.ಪುಟ್ಟಸ್ವಾಮಿ ನಿರ್ದೇಶಕರಾದ ಲೋಕೇಶ್ ನಾಗರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.